ಉಡುಪಿ: ಮಣಿಪಾಲ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖರ್ತನಾಕ್ TATTO – 313 ಗ್ಯಾಂಗ್ ಅನ್ನು ಬೇಧಿಸಿದ್ದು, ₹7.90 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
‘TATTO – 313’ ಜಾಲ ರೈಲ್ವೆ ನಿಲ್ದಾಣಗಳ ಸಮೀಪವಿರುವ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ದರೋಡೆ ಮಾಡುತ್ತಿತ್ತು. ಈ ಅಂತರ್-ರಾಜ್ಯ ಮುಸುಕುಧಾರಿ ಕಳ್ಳರ ತಂಡದ ಹೆಡೆಮುರಿ ಕಟ್ಟುವಲ್ಲಿ ಮಣಿಪಾಲ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೃತ್ತಿಪರ ಕಳ್ಳರನ್ನು ಬಂಧಿಸಲಾಗಿದ್ದು, ಅವರಿಂದ ಅಂದಾಜು ₹7.90 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ನಿವಾಸಿ ಅಮಿತಾ ಡ್ಯಾನಿಯಲ್ ಅವರು ಕಳೆದ ಫೆಬ್ರವರಿ 3ರಂದು ನಸುಕಿನ ವೇಳೆ ತಮ್ಮ ಮನೆಗೆ ಬೀಗ ಹಾಕಿ ತಾಯಿಯ ಮನೆಗೆ ತೆರಳಿದ್ದರು. ಫೆಬ್ರವರಿ 4ರಂದು ಮಧ್ಯಾಹ್ನ ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಪಕ್ಕದ ಮನೆಯವರು ಅಮಿತಾ ಅವರಿಗೆ ಮಾಹಿತಿ ನೀಡಿದ್ದರು. ಅಮಿತಾ ಅವರು ಬಂದು ಪರಿಶೀಲಿಸಿದಾಗ ಕಳ್ಳರು ಬಾಗಿಲು ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ 75 ಗ್ರಾಂ ತೂಕದ ₹7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2026 ರಂತೆ ಭಾರತೀಯ ನ್ಯಾಯ ಸಂಹಿತೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
6 ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಣಿಪಾಲ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡವು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿತು. ವಿಚಾರಣೆಯಲ್ಲಿ ಆರೋಪಿಗಳು ಕಳ್ಳತನ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯದಿಂದ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದ ಅಧಿಕಾರಿಗಳು, ಕಳ್ಳರು ನೀಡಿದ ಸುಳಿವಿನ ಮೇರೆಗೆ ಶಿವಮೊಗ್ಗದ ಲಾಡ್ಜ್ ಒಂದರ ಕೊಠಡಿಯ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಕಳ್ಳರು ಬಚ್ಚಿಟ್ಟಿದ್ದ ಈ ಕೆಳಗಿನ ಆಭರಣಗಳನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ:
ವಶಪಡಿಸಿಕೊಂಡ ಚಿನ್ನಾಭರಣಗಳ ವಿವರ;
₹5.06 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ – 01 (39.70 ಗ್ರಾಂ)
₹1.86 ಲಕ್ಷ ಮೌಲ್ಯದ ಚಿನ್ನದ ನೆಕ್ಲಿಸ್ – 01 (13.30 ಗ್ರಾಂ)
₹54,000 ಮೌಲ್ಯದ ಚಿನ್ನದ ಚೈನ್ – 01 (3.87 ಗ್ರಾಂ)
₹44,000 ಮೌಲ್ಯದ ಚಿನ್ನದ ಕಿವಿಯೋಲೆ – 01 ಜೊತೆ (3.15 ಗ್ರಾಂ)
ಇದರೊಂದಿಗೆ ಆರೋಪಿಗಳ ಬಳಿಯಿದ್ದ 2 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಇನ್ನು ಬಂಧಿತ ಆರೋಪಿಗಳು ತಮ್ಮ ಕೈಗಳ ಮೇಲೆ ‘TATTO 313’ ಎಂಬ ಟ್ಯಾಟೂ ಹಾಕಿಸಿಕೊಂಡು ಇದೇ ಹೆಸರಿನಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದರು. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ಹಳಿ ಮತ್ತು ನಿಲ್ದಾಣಗಳ ಪಕ್ಕದಲ್ಲಿರುವ ಬೀಗ ಹಾಕಿದ ಮನೆಗಳನ್ನು ಹಗಲು ವೇಳೆ ಗುರುತಿಸಿ, ರಾತ್ರಿ ವೇಳೆ ದರೋಡೆ ಮಾಡುತ್ತಿದ್ದರು. ಕೃತ್ಯ ಎಸಗುವಾಗ ಇವರು ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಹಾಗೂ ಕಾಲಿಗೆ ಸಾಕ್ಸ್ ಧರಿಸುತ್ತಿದ್ದರು. ಕಾಲಿಗೆ ಸಾಕ್ಸ್ ಧರಿಸುವುದರಿಂದ ಯಾವುದೇ ರೀತಿಯ ಬೆರಳಚ್ಚು ಅಥವಾ ಪಾದದ ಗುರುತುಗಳು ಪೊಲೀಸರಿಗೆ ಸಿಗುತ್ತಿರಲಿಲ್ಲ. ಬಾಗಿಲು ಮುರಿಯಲು ಬಲವಾದ ಕಬ್ಬಿಣದ ಆಯುಧಗಳನ್ನು ಬಳಸುತ್ತಿದ್ದರು. ಆರೋಪಿಗಳ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿದ್ದು, 2025ರ ಸೆಪ್ಟೆಂಬರ್ ತಿಂಗಳಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲೂ ಇವರ ಕೈವಾಡ ಇರುವುದು ತನಿಖೆಯಲ್ಲಿ ಬಹಿರಂಗವಾಗಿದೆ.


