
ಕುಂದಾಪುರ: ಕೋಟೇಶ್ವರದ ಪ್ರಸಿದ್ಧ ಕೊಡಿ ಹಬ್ಬದ ಜನಜಂಗುಳಿಯ ನಡುವೆ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ₹6 ಲಕ್ಷ ಮೌಲ್ಯದ 7 ಪವನ್ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿದ್ದ ತಮಿಳುನಾಡು ಹಾಗೂ ಕೊಡಗು ಮೂಲದ ಐವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕುಶಾಲನಗರದ ಭಾಗ್ಯ (39), ಎಸ್. ನಾಗರಾಜ (48) ಹಾಗೂ ತಮಿಳುನಾಡು ಮೂಲದ ಅಶ್ವಿನಿ ಯಾನೆ ಗಾಯತ್ರಿ (25), ಕಾಮಾಚಿ (50) ಮತ್ತು ಆದಮ್ಮಾಳ್ (49) ಬಂಧಿತ ಆರೋಪಿಗಳು.
ನವೆಂಬರ್ 24ರಂದು ಮಧ್ಯಾಹ್ನ 12.30ರ ಸುಮಾರಿಗೆ ಗೀತಾ ಎಂಬುವವರು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಹೊರಭಾಗದ ಊಟದ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ, ಜನಸಂದಣಿಯ ಲಾಭ ಪಡೆದ ಆರೋಪಿಗಳ ತಂಡ ಕರಿಮಣಿ ಸರ ಎಗರಿಸಿ ಪರಾರಿಯಾಗಿತ್ತು.
ಈ ಕುರಿತು ದಾಖಲಾದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಅಂತರರಾಜ್ಯ ಕಳ್ಳರ ಜಾಲವನ್ನು ಭೇದಿಸಿ ಐವರನ್ನು ಸೆರೆಹಿಡಿದಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ₹6 ಲಕ್ಷ ಮೌಲ್ಯದ 7 ಪವನ್ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ 7 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


