
ಉಡುಪಿ; ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡು ಹಣ ಕೊಡದೆ ಪರಾರಿಯಾಗಿರುವ ಘಟನೆ ಶಂಕರಪುರದ ಸುಭಾಷ್ ನಗರದಲ್ಲಿರುವ ಇಂಡಿಯನ್ ಆಯಿಲ್ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ನಡೆದಿದೆ.
ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಬಂದಿದ್ದ ಮೂವರು ಯುವಕರು ಈ ವಂಚನೆ ಎಸಗಿದ್ದಾರೆ. ಇವರಿಂದ ಮೋಸಹೋದ ಪೆಟ್ರೋಲ್ ಬಂಕ್ ಸಿಬ್ಬಂದಿ ನೀಡಿದ ದೂರಿನನ್ವಯ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಕ್ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಬಿಳಿ ಬಣ್ಣದ ಕಾರಿನಲ್ಲಿ ಬಂದ ಮೂವರು ಅಪರಿಚಿತ ಯುವಕರು ತಮ್ಮ ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸುವಂತೆ ತಿಳಿಸಿದ್ದರು. ಅದರಂತೆ ಬಂಕ್ ಸಿಬ್ಬಂದಿ ₹4,711 ಮೌಲ್ಯದ ಡೀಸೆಲ್ ಅನ್ನು ಕಾರಿನ ಟ್ಯಾಂಕ್‌ಗೆ ತುಂಬಿಸಿದ್ದರು. ಇಂಧನ ತುಂಬ ಮುಗಿಯುತ್ತಿದ್ದಂತೆಯೇ ಕಾರಿನ ಒಳಗಿದ್ದ ಯುವಕರು ಬಿಲ್ ನೀಡುವಂತೆ ಸಿಬ್ಬಂದಿಗೆ ಕೇಳಿದ್ದಾರೆ. ನೌಕರ ಬಿಲ್ ತರಲು ತಿರುಗುತ್ತಿದ್ದಂತೆಯೇ, ಕಾರಿನಲ್ಲಿದ್ದವರು ಹಣ ನೀಡದೇ ವಾಹನವನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಮುಖ್ಯ ರಸ್ತೆಯ ಕಡೆಗೆ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಬಂದಿದ್ದ ಕಾರಿಗೆ ಕಪ್ಪು ಬಣ್ಣದ ನಿಷೇಧಿತ ‘ಟಿಂಟ್ ಗ್ಲಾಸ್’ ಅಳವಡಿಸಲಾಗಿತ್ತು ಎನ್ನಲಾಗಿದೆ. ಬಂಕ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆಯಾದರೂ, ಕಾರಿನ ನಂಬರ್ ಪ್ಲೇಟ್ ಹಾಗೂ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಆದಾಗ್ಯೂ, ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳು ಮತ್ತು ವಾಹನದ ಗುರುತು ಪತ್ತೆಹಚ್ಚಲು ಶಿರ್ವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.


