Thursday, June 4, 2026
Homeಅಪರಾಧದಿನ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಮಗನನ್ನು ಕೊಂದ ಅಪ್ಪ!

ದಿನ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಮಗನನ್ನು ಕೊಂದ ಅಪ್ಪ!

- Advertisement -
- Advertisement -

ಬೆಂಗಳೂರು: ಇಲ್ಲಿನ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ತಂದೆಯೇ ಮಗನನ್ನು ಕುತ್ತಿಗೆ ಬಿಗಿದು ಹತ್ಯೆಗೈದಿದ್ದು, ಪುತ್ರನ ಕೊಲೆಗೆ ಕಾರಣ ಪ್ರತಿದಿನ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದ್ದು, ಈ ಕುರಿತಂತೆ ದೂರು ದಾಖಲಾಗಿದೆ.

ಕೊಲೆಯಾದ ವ್ಯಕ್ತಿ ನಾಗದೇವನಹಳ್ಳಿ ನಿವಾಸಿ ರಾಜೇಶ್‌(35) ಎಂದು ತಿಳಿದು ಬಂದಿದೆ. ಆರೋಪಿ, ಈತನ ತಂದೆ ಲಿಂಗಪ್ಪ(58) ಎಂಬುವರನ್ನು ಬಂಧಿಸಲಾಗಿದೆ.

ಘಟನೆಯ ವಿವರ: ಅ.19 ರಂದು ನಸುಕಿನ 2 ಗಂಟೆ ಸುಮಾರಿಗೆ ಆರೋಪಿ ತಂದೆಯು ತನ್ನ ಪುತ್ರ ರಾಜೇಶ್‌ನ ತಲೆಗೆ ಮರದ ಪಟ್ಟಿಯಿಂದ ಹೊಡೆದಿದ್ದು, ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದ. ಈ ಸಂಬಂಧ ಮೃತನ ಚಿಕ್ಕಮ್ಮನ ಪುತ್ರ ಲೋಕೇಶ್‌ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವುಲೆ ಗ್ರಾಮದ ಲಿಂಗಪ್ಪ ಹಲವು ವರ್ಷಗಳ ಹಿಂದೆಯೆ ಬೆಂಗಳೂರಿಗೆ ಬಂದಿದ್ದು, ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಲಿಂಗಪ್ಪ ಅಡುಗೆ ಕೆಲಸ ಮಾಡಿಕೊಂಡಿದ್ದರು. ಪುತ್ರ ರಾಜೇಶ್‌ ಕ್ಯಾಬ್‌ ಚಾಲಕನಾಗಿದ್ದ. 6 ವರ್ಷಗಳ ಹಿಂದೆಯೇ ಆತನಿಗೆ ಮದುವೆಯಾಗಿದ್ದು, ದಂಪತಿಗೆ 1 ಮಗು ಇದೆ ಎನ್ನಲಾಗಿದೆ.

ರಾಜೇಶ್ ಪ್ರತೀದಿನ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತ ಪತ್ನಿ, ರಾಜೇಶ್‌ ಬಿಟ್ಟು ತವರು ಮನೆಗೆ ಹೋಗಿದ್ದಾರೆ. ಹೀಗಾಗಿ ತಂದೆ-ತಾಯಿ ಜತೆ ರಾಜೇಶ್‌ ವಾಸವಾಗಿದ್ದು, ಈಗಲೂ ಪ್ರತಿದಿನ ಕುಡಿದು ಬಂದು ತಂದೆ-ತಾಯಿ ಜತೆ ಗಲಾಟೆ ಮಾಡುತ್ತಿದ್ದ. ಕೆಲವೊಮ್ಮೆ ತಂದೆ ಮೇಲೆ ಹಲ್ಲೆಗೂ ಮುಂದಾಗಿದ್ದನು. ಹೀಗಾಗಿ ಮಗನ ಕುಡಿತ, ದುರ್ನಡತೆಯಿಂದ ತಂದೆ ರೋಸಿ ಹೋಗಿದ್ದರು. ಈ ಮಧ್ಯೆ, ಅ.19 ರಂದು ಕುಡಿದು ದಾಂಧಲೆ ಮಾಡಿದ ಪುತ್ರನನ್ನು ತಂದೆ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸಂಬಂಧಿ ಲೋಕೇಶ್ ಎಂಬಾತನು ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿ, ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆ ರವಾನಿಸಿದ್ದಾರೆ. ಬಳಿಕ ಲಿಂಗಪ್ಪರನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು ಎನ್ನಲಾಗಿದೆ.

- Advertisement -

Latest News

error: Content is protected !!