ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ನೀರಾನೆ ‘ಹಂಸಿಣಿ’ ಎಂಬ ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದೆ. ಕೇವಲ 25 ದಿನಗಳ ಅಂತರದಲ್ಲಿ ವೈದ್ಯೆ ಮತ್ತು ನೀರಾನೆ ಎರಡೂ ಸಾವನ್ನಪ್ಪಿದೆ.
ಗರ್ಭಿಣಿಯಾಗಿದ್ದ ಹಂಸಿಣಿ ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಗರ್ಭದಲ್ಲೇ ಮರಿ ಮೃತಪಟ್ಟಿದ್ದರಿಂದ ಹಂಸಿಣಿಯ ದೇಹದಲ್ಲಿ ವಿಷಕಾರಿ ಅಂಶಗಳು ಹರಡಿ ಸೋಂಕು ಕಾಣಿಸಿಕೊಂಡಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನವನದ ತಜ್ಞ ವೈದ್ಯರು ಹಾಗೂ ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನ ತಜ್ಞರು ಸತತ ಚಿಕಿತ್ಸೆ ನೀಡಿದರೂ, ಚಿಕಿತ್ಸೆಗೆ ಸ್ಪಂದಿಸದ ಹಂಸಿಣಿ ಮಂಗಳವಾರ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದೆ.
12 ವರ್ಷದ ಹಂಸಿಣಿಯ ಬದುಕು ದುರಂತಗಳ ಸರಮಾಲೆಯಾಗಿತ್ತು. ಈ ಹಿಂದೆಯೂ ಎರಡು ಬಾರಿ ಮರಿ ಹಾಕಿದ್ದ ಹಂಸಿಣಿ, ಆ ಎರಡೂ ಮರಿಗಳನ್ನು ಕಳೆದುಕೊಂಡಿತ್ತು. ಈ ಬಾರಿ ಮೂರನೇ ಮರಿಯ ನಿರೀಕ್ಷೆಯಲ್ಲಿದ್ದಾಗ ಮಾರ್ಚ್ 19ರಂದು ದುರ್ಘಟನೆ ನಡೆದಿತ್ತು. ಅಂದು ರಾತ್ರಿ ಗರ್ಭಿಣಿಯಾಗಿದ್ದ ಹಂಸಿಣಿಯ ಆರೋಗ್ಯ ತಪಾಸಣೆ ಮಾಡಲು ಹೋದಾಗ, ಅದು ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ನಡೆಸಿತ್ತು.


