Monday, July 6, 2026
Homeಪ್ರಮುಖ-ಸುದ್ದಿಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ!

ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ!

- Advertisement -
- Advertisement -

ಶಿವಮೊಗ್ಗ: ಹೆಣ್ಣು ಮಗುವೊಂದನ್ನು ಚೀಲದಲ್ಲಿ ಕಟ್ಟಿ, ಬಾಯಿಗೆ ಫೀಡಿಂಗ್ ಬಾಟಲ್ ಇಟ್ಟು ನಿರ್ದಕ್ಷಿಣ್ಯವಾಗಿ ತೊರೆದು ಹೋಗಿರುವ ಅಮಾನವೀಯ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗವಟೂರು ಹೊಳೆ ಸಮೀಪದ ಬಿಳಕಿ ಗ್ರಾಮದ ತೆಂಕೋಲ್ ಬಸ್ ನಿಲ್ದಾಣದಲ್ಲಿ ಈ ನವಜಾತ ಶಿಶು ಪತ್ತೆಯಾಗಿದೆ. ಭಾನುವಾರ ರಾತ್ರಿ ಬಸ್ ನಿಲ್ದಾಣದ ಬಳಿ ಸಾಗುತ್ತಿದ್ದ ದಾರಿಹೋಕರಿಗೆ ಮಗುವಿನ ಅಳುವಿನ ಶಬ್ದ ಕೇಳಿಸಿದೆ. ಆರಂಭದಲ್ಲಿ ಅದು ನಾಯಿ ಅಥವಾ ಬೆಕ್ಕಿನ ಮರಿ ಇರಬಹುದೆಂದು ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ, ಚೀಲದೊಳಗೆ ನವಜಾತ ಹೆಣ್ಣು ಮಗು ಇರುವುದು ಕಂಡುಬಂದಿದೆ. ಸಾರ್ವಜನಿಕರು ತಕ್ಷಣವೇ ಈ ಕುರಿತು ರಿಪ್ಪನ್ ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪಿಎಸ್ಸೈ ರಾಜು ರೆಡ್ಡಿ, ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ರಾತ್ರಿ ಸುಮಾರು 9 ಗಂಟೆ ವೇಳೆ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಮಗುವನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ವೈದ್ಯರ ಪ್ರಾಥಮಿಕ ಪರೀಕ್ಷೆಯಲ್ಲಿ ಮಗು ಆರೋಗ್ಯವಾಗಿರುವುದು ತಿಳಿದುಬಂದಿದೆ.

ಪ್ರಸ್ತುತ ಮಗುವನ್ನು ಹೆಚ್ಚಿನ ಆರೈಕೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

- Advertisement -

Latest News

error: Content is protected !!