
ಸುಳ್ಯ:ಮದ್ಯದ ಅಮಲಿನಲ್ಲಿ ರಸ್ತೆ ಬದಿಯ ಭದ್ರತಾ ಕನ್ನಡಿಯನ್ನು (ಕಾನ್ವೆಕ್ಸ್ ಮಿರರ್) ಕದ್ದು ಪರಾರಿಯಾಗಿದ್ದ ಇಬ್ಬರು ಯುವಕರನ್ನು ಪತ್ತೆ ಹಚ್ಚಿದ ಪೊಲೀಸರು, ಅವರಿಂದಲೇ ಆ ಕನ್ನಡಿಯನ್ನು ಇದ್ದ ಜಾಗದಲ್ಲೇ ಮರುಜೋಡಿಸಿ ಬುದ್ಧಿ ಕಲಿಸಿದ ಸ್ವಾರಸ್ಯಕರ ಘಟನೆ ಸಂಪಾಜೆಯಲ್ಲಿ ನಡೆದಿದೆ. ಪುತ್ತೂರು ಮೂಲದ ಶ್ರೇಯಸ್ ಕುಮಾರ್ ಹಾಗೂ ಪ್ರೀತಮ್ ರೈ ಎಂಬವರೇ ಈ ಕೃತ್ಯ ಎಸಗಿದ ಯುವಕರು.
ಪುತ್ತೂರಿನಿಂದ ಮಡಿಕೇರಿಗೆ ಕಾರಿನಲ್ಲಿ ಪ್ರವಾಸ ಹೊರಟಿದ್ದ ಈ ಯುವಕರು, ತಡರಾತ್ರಿ ಸಂಪಾಜೆ ಗ್ರಾಮದ ಚಡಾವಿನ ಅಪಾಯಕಾರಿ ತಿರುವಿನಲ್ಲಿದ್ದ ಕಾನ್ವೆಕ್ಸ್ ಕನ್ನಡಿಯನ್ನು ಬಿಚ್ಚಿ ಕಾರಿನ ಡಿಕ್ಕಿಯಲ್ಲಿ ಇಟ್ಟುಕೊಂಡು ಹೋಗಿದ್ದರು. ಮರುದಿನ ರಸ್ತೆ ಬದಿಯ ಕನ್ನಡಿ ಮಾಯವಾಗಿರುವುದನ್ನು ಗಮನಿಸಿದ ಸ್ಥಳೀಯರು, ಸಮೀಪದ ಮನೆಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.
ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಂಪಾಜೆ ಪೊಲೀಸರು, ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿದ್ದಾರೆ. ವಿಚಾರಣೆ ವೇಳೆ ಕುಡಿದ ಮತ್ತಿನಲ್ಲಿ ಈ ರೀತಿ ಮಾಡಿರುವುದಾಗಿ ಯುವಕರು ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಪೊಲೀಸರು ಕದ್ದ ಕನ್ನಡಿಯನ್ನು ಯುವಕರಿಂದಲೇ ಆ ಸ್ಥಳಕ್ಕೆ ತರಿಸಿ, ಅವರಿಂದಲೇ ಯಥಾಸ್ಥಿತಿಯಲ್ಲಿ ಮರುಜೋಡಣೆ ಮಾಡಿಸಿ, ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪೊಲೀಸರ ಈ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.


