Friday, September 11, 2026
Homeಕರಾವಳಿಮಂಗಳೂರುಮಂಗಳೂರು: ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ; ನಾಲ್ವರು ಅಂತರ ಜಿಲ್ಲಾ ಕಳ್ಳರ ಬಂಧನ, ₹17.20 ಲಕ್ಷ...

ಮಂಗಳೂರು: ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ; ನಾಲ್ವರು ಅಂತರ ಜಿಲ್ಲಾ ಕಳ್ಳರ ಬಂಧನ, ₹17.20 ಲಕ್ಷ ಮೌಲ್ಯದ ಸ್ವತ್ತು ವಶ

- Advertisement -
- Advertisement -

ಮಂಗಳೂರು: ಮುಲ್ಕಿ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಸರಣಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕುಖ್ಯಾತ ಅಂತರ ಜಿಲ್ಲಾ ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹17.20 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾಹೀದ್ ಸಿನಾನ್ (36) – ಹೆಜಮಾಡಿ, ಉಡುಪಿ ಜಿಲ್ಲೆ, ಯಾಸೀನ್ (36) – ನಿಟ್ಟೆ, ಕಾರ್ಕಳ, ಮಹಮದ್ ಅಫ್ರಿದಿ (26) – ಗೋಕುಲನಗರ, ದಾವಣಗೆರೆ, ಎಸ್.ಕೆ. ಅಬ್ದುಲ್ ಜುಮ್ಮಾನ್ (26) – ಜಾಲಿನಗರ, ದಾವಣಗೆರೆ ಬಂಧಿತ ಆರೋಪಿಗಳು.

    ಪ್ರಕರಣದ ಹಿನ್ನೆಲೆ: ಸೆಪ್ಟೆಂಬರ್ 1 ರಂದು ಮಧ್ಯರಾತ್ರಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಬೀಗ ಮುರಿದು, ದೈವದ ಬೆಲೆಬಾಳುವ ಮೂರ್ತಿಗಳು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ವಿಶೇಷ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ, ಸೆಪ್ಟೆಂಬರ್ 6 ರಂದು ಮುಲ್ಕಿಯ ಕಾರ್ನಾಡುವಿನಲ್ಲಿ ಜಾಹೀದ್ ಸಿನಾನ್ ಮತ್ತು ಯಾಸೀನ್‌ನನ್ನು ಹಾಗೂ ಸೆಪ್ಟೆಂಬರ್ 7 ರಂದು ದಾವಣಗೆರೆಯಲ್ಲಿ ಮಹಮದ್ ಅಫ್ರಿದಿ ಮತ್ತು ಅಬ್ದುಲ್ ಜುಮ್ಮಾನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

    ₹17.20 ಲಕ್ಷ ಮೌಲ್ಯದ ಸ್ವತ್ತು ವಶ: ಬಂಧಿತರಿಂದ ಸುಮಾರು 4 ಕೆ.ಜಿ 521 ಗ್ರಾಂ ಬೆಳ್ಳಿ ಹಾಗೂ 34.820 ಗ್ರಾಂ ಚಿನ್ನದ ಆಭರಣಗಳು (ಅಂದಾಜು ಮೌಲ್ಯ ₹11.20 ಲಕ್ಷ) ಸೇರಿದಂತೆ, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬೈಕ್ (ಅಂದಾಜು ಮೌಲ್ಯ ₹6 ಲಕ್ಷ) ಒಟ್ಟು ₹17,20,000/- ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೂರು ದೇವಸ್ಥಾನಗಳ ಕಳವು ಪ್ರಕರಣ ಪತ್ತೆ: ಈ ಆರೋಪಿಗಳ ಬಂಧನದಿಂದ ಮುಲ್ಕಿ ದೈವಸ್ಥಾನದ ಕಳವು ಮಾತ್ರವಲ್ಲದೆ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನ ಹಾಗೂ ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದಿದ್ದ ಕಳವು ಪ್ರಕರಣಗಳು ಸಹ ಪತ್ತೆಯಾಗಿವೆ.

    ಪ್ರಕರಣದ ಮೊದಲನೇ ಆರೋಪಿ ಜಾಹೀದ್ ಸಿನಾನ್ ವಿರುದ್ಧ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಮತ್ತು ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಈಗಾಗಲೇ 18 ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

    ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ನೇತೃತ್ವದಲ್ಲಿ, ಸುರತ್ಕಲ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್, ಮುಲ್ಕಿ ಪಿಎಸ್‌ಐ ರಾಘವೇಂದ್ರ ನಾಯಕ್ ಹಾಗೂ ಸಿಬ್ಬಂದಿಯವರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

    - Advertisement -

    Latest News

    error: Content is protected !!