ಬೈಂದೂರು ತಾಲೂಕಿನ ಶಿರೂರು ಸಮೀಪ ಗುರುವಾರ ಹೆದ್ದಾರಿಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಶಿರೂರಿನ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ.
ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಲಾರಿಯೊಂದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ರಸ್ತೆ ಸಂಚಾರ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನ ಸಂಚಾರ ತಡೆಯಲಾಗಿತ್ತು. ಈ ವೇಳೆ ಇಳಿಜಾರು ರಸ್ತೆಯಲ್ಲಿ ಅತಿವೇಗವಾಗಿ ಬಂದ ಸರಕು ಸಾಗಣೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ, ಸ್ಥಳದಲ್ಲಿ ನಿಲ್ಲಿಸಿದ್ದ ಹೆದ್ದಾರಿ ಗಸ್ತು ವಾಹನಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ಲಾರಿ ನಾಲ್ಕು ಬೈಕ್ಗಳಿಗೂ ಢಿಕ್ಕಿ ಹೊಡೆದಿದ್ದು, ಈ ವೇಳೆ ಬೈಕ್ ಸವಾರ ನಾಗೇಂದ್ರ ಮಹಾಲೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಅಪಘಾತಕ್ಕೀಡಾಗಿದ್ದ ಲಾರಿಯನ್ನು ಮೇಲೆತ್ತುವ ಕಾರ್ಯಾಚರಣೆಗಾಗಿ ರಸ್ತೆ ತಡೆ ಮಾಡಲಾಗಿತ್ತು ಎನ್ನಲಾಗಿದೆ. ಕೇರಳದಿಂದ ಮಹಾರಾಷ್ಟ್ರಕ್ಕೆ ರಬ್ಬರ್ ಸಾಗಿಸುತ್ತಿದ್ದ ಲಾರಿ ಇದಾಗಿದ್ದು, ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.


