ಮಂಗಳೂರು: ಯಶವಂತಪುರ ಮತ್ತು ಮಂಗಳೂರು ಜಂಕ್ಷನ್ ನಡುವಿನ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ರೈಲು ನಿಗದಿತ ಸಮಯಕ್ಕಿಂತ 55 ನಿಮಿಷ ಮುಂಚಿತವಾಗಿ ಗಮ್ಯಸ್ಥಾನ ತಲುಪಿದೆ.
ಸೆಪ್ಟೆಂಬರ್ 5ರಂದು ನಡೆದಿದ್ದ ಮೊದಲ ಪ್ರಾಯೋಗಿಕ ಸಂಚಾರವು ತಾಂತ್ರಿಕ ದೋಷದಿಂದಾಗಿ ಎರಡು ಗಂಟೆ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಎರಡನೇ ಪ್ರಾಯೋಗಿಕ ಸಂಚಾರವನ್ನು ಮಂಗಳೂರು ಸೆಂಟ್ರಲ್ ಬದಲು ಮಂಗಳೂರು ಜಂಕ್ಷನ್ಗಷ್ಟೇ ಮಿತಿಗೊಳಿಸಿತ್ತು.
ಯಶವಂತಪುರದಿಂದ ಬೆಳಿಗ್ಗೆ 6.50ಕ್ಕೆ ಹೊರಟ ರೈಲು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ಹಾಗೂ ಕಬಕ ಪುತ್ತೂರು ಮಾರ್ಗವಾಗಿ ಅಪರಾಹ್ನ 2.50ಕ್ಕೆ ಮಂಗಳೂರು ಜಂಕ್ಷನ್ ತಲುಪಬೇಕಿತ್ತು. ಆದರೆ, ಯಾವುದೇ ತಾಂತ್ರಿಕ ಅಡೆತಡೆ ಇಲ್ಲದೆ ಅಪರಾಹ್ನ 1.55ಕ್ಕೇ ತಲುಪಿದೆ.
ಪುತ್ತೂರಿನಲ್ಲಿ ನಿಲುಗಡೆ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆ: ಪುತ್ತೂರು ನಿಲ್ದಾಣದಲ್ಲಿ 2 ನಿಮಿಷ ನಿಲುಗಡೆ ನೀಡಲಾಗುತ್ತದೆ ಎಂಬ ವದಂತಿ ಹಬ್ಬಿದ್ದರಿಂದ ಅಪಾರ ಸಂಖ್ಯೆಯ ಸಾರ್ವಜನಿಕರು ಹಾಗೂ ಮುಖಂಡರು ನಿಲ್ದಾಣದಲ್ಲಿ ಜಮಾಯಿಸಿದ್ದರು. ಆದರೆ, ರೈಲು ಎರಡೂ ಕಡೆಗಳ ಪ್ರಯಾಣದ ವೇಳೆಯೂ ಪುತ್ತೂರಿನಲ್ಲಿ ನಿಲ್ಲದೆ ನೇರವಾಗಿ ಸಂಚರಿಸಿತು.


