Thursday, April 25, 2024
Homeಕರಾವಳಿಉಡುಪಿಕನಕನ ಕಿಂಡಿಯ ಪಕ್ಕದಲ್ಲೇ ನಿರಂತರ ನೂರು ದಿನಗಳ ಭಜನೆ ಪೂರ್ಣ: ಹೊಸ ದಾಖಲೆ ಬರೆದ ಉಡುಪಿಯ...

ಕನಕನ ಕಿಂಡಿಯ ಪಕ್ಕದಲ್ಲೇ ನಿರಂತರ ನೂರು ದಿನಗಳ ಭಜನೆ ಪೂರ್ಣ: ಹೊಸ ದಾಖಲೆ ಬರೆದ ಉಡುಪಿಯ ಶ್ರೀ ಕೃಷ್ಣ ಮಠ

spot_img
- Advertisement -
- Advertisement -

ಉಡುಪಿ: ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎನ್ನುವ ಮಾತಿದೆ. ನಿರಂತರ ಭಜನೆಯ ಮೂಲಕ ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಡುಪಿಯ ಶ್ರೀ ಕೃಷ್ಣ ಮಠ ಹೊಸ ದಾಖಲೆ ಬರೆದಿದೆ. ಕನಕನಿಗೊಲಿದ ಕೃಷ್ಣನ ಸಂಕೇತವಾದ ಕಿಂಡಿಯ ಪಕ್ಕದಲ್ಲೇ ನಿರಂತರ ನೂರು ದಿನಗಳ ಭಜನೆ ಪೂರ್ಣಗೊಂಡಿದೆ.

ಜನಸಾಮಾನ್ಯರು ಕೂಡ ಭಕ್ತಿಯನ್ನು ವ್ಯಕ್ತಪಡಿಸಲು ಅನುಸರಿಸುವ ಸುಲಭಮಾರ್ಗ ಭಜನೆ. ದಾಸಸಾಹಿತ್ಯವು ಭಜನೆಗಳ ಮೂಲಕ ದೇವರು ಮತ್ತು ಭಕ್ತರ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಬಂದಿರುವುದು ಉಡುಪಿಯ ಇತಿಹಾಸ. ಇದೇ ಇತಿಹಾಸದ ಪುಟ ಸೇರುವ ಮತ್ತೊಂದು ಮಹತ್ವದ ಬೆಳವಣಿಗೆ ಉಡುಪಿಯಲ್ಲಿ ನಡೆದಿದೆ. ಸತತ ನೂರು ದಿನಗಳ ಕಾಲ ಪ್ರತಿದಿನ ಹನ್ನೆರಡು ತಾಸು ಭಜನೆ ನಡೆಸುವ ಮೂಲಕ ಉಡುಪಿಯ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವವು ಭಕ್ತಿಸಿದ್ಧಾಂತ ಪಸರಿಸಿದೆ.

ಜನವರಿ 18ರ ಬೆಳಿಗ್ಗೆ ಪರ್ಯಾಯ ಪೀಠಾರೋಹಣ ಮಾಡುವಾಗ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಈ ಭಜನಾ ಉತ್ಸವಕ್ಕೆ ಚಾಲನೆ ನೀಡಿದ್ದರು. ಆ ದಿನವೇ ಮೊದಲ್ಗೊಂಡು ಪ್ರತಿದಿನ ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟು ಗಂಟೆಯವರೆಗೆ ಕನಕ ಗೋಪುರದ ಬಳಿಯ ಭಜನೆಯ ವೇದಿಕೆಯಲ್ಲಿ ನಿರಂತರ ಭಜನೆ ನಡೆಯುತ್ತಿದೆ.

ಪ್ರತಿಯೊಂದು ಭಜನಾ ತಂಡಗಳು ತಲಾ ಎರಡು ಗಂಟೆ ಹಾಡುತ್ತಿದ್ದು ದಿನಕ್ಕೆ ಒಟ್ಟು 6 ಭಜನಾ ತಂಡಗಳು ಪಾಲ್ಗೊಳ್ಳುತ್ತಿವೆ. ಪ್ರತಿ ತಿಂಗಳಲ್ಲಿ ಒಂದು ಬಾರಿ ಎಲ್ಲಾ ಭಜನಾ ತಂಡಕ್ಕೂ ಅವಕಾಶ ಸಿಗುತ್ತಿದೆ. ನಾಡಿನ ಮೂಲೆಮೂಲೆಗಳಿಂದ ಮತ್ತು ಸ್ಥಳೀಯ ಭಜನಾ ತಂಡಗಳಿಗೆ ಆದ್ಯತೆ ನೀಡಿ ಭಜನಾ ಕಾರ್ಯಕ್ರಮ ಜೋಡಿಸಲಾಗಿದೆ.

ಸುಮಾರು 180 ಭಜನಾ ಮಂಡಳಿಯವರು ಹೆಸರನ್ನು ನೋಂದಾಯಿಸಿದ್ದಾರೆ. ಆಸಕ್ತಿ ತೋರಿರುವ ಭಜನಾ ತಂಡಗಳಿಗೆ ಮೊದಲೇ ಅವಧಿಯನ್ನು ನಿಗದಿಮಾಡಲಾಗುತ್ತದೆ. ಉಡುಪಿ ಮಾತ್ರವಲ್ಲದೆ ಬೆಂಗಳೂರು, ಚಿಕ್ಕಮಗಳೂರು, ಚೆನ್ನೈಯಿಂದ ಕೂಡ ತಂಡಗಳು ಬಂದು ಹಾಡಿ ಹೋಗಿದ್ದಾರೆ. ಪರವೂರುಗಳಿಂದ ಬರುವ ಭಜನಾ ತಂಡಗಳಿಗೆ ವಾಸ್ತವ್ಯ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಭಜನೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಕೃಷ್ಣಾಪುರ ಮಠದ ವತಿಯಿಂದ ಪ್ರಸಾದವನ್ನು ನೀಡಲಾಗುತ್ತದೆ.

ಭಜನಾ ಕ್ಷೇತ್ರಕ್ಕೆ ಉಡುಪಿಯ ಕೃಷ್ಣ ಮಠದ ಕೊಡುಗೆ ಅತಿದೊಡ್ಡದು. ಕನಕ ಪುರಂದರ ದಾಸರು ಶ್ರೀವಾದಿರಾಜಸ್ವಾಮಿಗಳು ಸೇರಿದಂತೆ ಅನೇಕ ದಾಸವರೇಣ್ಯರು ಕೃಷ್ಣನ ಗುಣಗಾನ ಮಾಡುವ ಭಜನೆಗಳನ್ನು ಬರೆದಿದ್ದಾರೆ ಮತ್ತು ಹಾಡಿದ್ದಾರೆ.

ಮಂತ್ರ -ತಂತ್ರ ಗಳಿಗಿಂತಲೂ ದೇವರಿಗೆ ಭಜನೆಯೇ ಅಚ್ಚುಮೆಚ್ಚು. ಸಾಮಾನ್ಯ ಭಕ್ತರು ಕೂಡ ಭಜನೆಯ ಮೂಲಕ ತಮ್ಮ ಭಕ್ತಿಯನ್ನು ನಿವೇದಿಸಬಹುದು. ಕೀರ್ತನೆಗಳ ಮೂಲಕ ಕೃಷ್ಣನನ್ನು ಒಲಿಸಿಕೊಂಡ ಕನಕನಕಿಂಡಿ ಪಕ್ಕದಲ್ಲಿ ಮಹತ್ತರ ಕಾರ್ಯ ನಡೆಯುತ್ತಿರುವುದು ವಿಶೇಷವೆನಿಸಿದೆ. ಈ ಹಿಂದೆ ಪಲಿಮಾರು ಮಠದ ಪರ್ಯಾಯದಲ್ಲೂ ಸತತ 24 ಗಂಟೆಗಳ ಕಾಲ ಎರಡು ವರ್ಷದ ಅವಧಿಯುದ್ದಕ್ಕೂ ಭಜನೆ ನಡೆದು ದಾಖಲೆ ಆಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

- Advertisement -
spot_img

Latest News

error: Content is protected !!