ಸೌದಿ: ವಿಶ್ವದ ಮೋಟಾರ್‌ಸ್ಪೋರ್ಟ್ಸ್ ರ‍್ಯಾಲಿಗಳಲ್ಲಿ ಅತ್ಯಂತ ಅಪಾಯಕಾರಿಯೆಂದೇ ಹೇಳಲಾಗುವ ಡಕಾರ್ ರ‍್ಯಾಲಿಯ ನಾಲ್ಕನೇ ಹಂತದಲ್ಲಿ ಕನ್ನಡಿಗ ಸಿ.ಎಸ್.ಸಂತೋಷ್ ಅವರು ತೀವ್ರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದಾರೆ. ಅವರನ್ನು ರಿಯಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
37 ವರ್ಷದ ಸಂತೋಷ್ ಡಕಾರ್ ರ‍್ಯಾಲಿಯಲ್ಲಿ ಭಾರತದ ಪರವಾಗಿ ಈ ಹಿಂದೆ ಆರು ಬಾರಿ ಪ್ರತಿನಿಧಿಸಿದ್ದು, ಇದು ಏಳನೇ ಬಾರಿಯಾಗಿತ್ತು. ವಿಶ್ವದ ಕಠಿಣ ಮತ್ತು ಅಪಾಯಕಾರಿ ಡಕಾರ್ ರ‍್ಯಾಲಿಲಿಯಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರದ್ದು.
2021ರ ಡಕಾರ್ ರ‍್ಯಾಲಿ ಕಳೆದ ಭಾನುವಾರದಿಂದ ಆರಂಭವಾಗಿದೆ. ಈ ವರ್ಷದ ರ‍್ಯಾಲಿಯಲ್ಲಿ ಭಾರತದ ಸವಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ನಿನ್ನೆ ಈ ರ‍್ಯಾಲಿಯ ನಾಲ್ಕನೇ ಹಂತದ ಸ್ಪರ್ಧೆಗಳು ನಡೆಯುತ್ತಿದ್ದವು. ಈ ಸ್ಪರ್ಧೆಯಲ್ಲಿ ಹೀರೋ ಮೋಟೋಸ್ಪೋರ್ಟ್ ತಂಡವನ್ನು ಸಿಎಸ್ ಸಂತೋಷ್ ಪ್ರತಿನಿಧಿಸುತ್ತಿದ್ದರು.
2015ರಲ್ಲಿ ಡಕಾರ್ ರೇಸ್ ಮುಕ್ತಾಯಗೊಳಿಸುವ ಮೂಲಕ ಸಿಎಸ್ ಸಂತೋಷ್ ಈ ಸಾಧನೆ ಮಾಡಿದ ಭಾರತದ ಮೊಟ್ಟ ಮೊದಲ ಸವಾರ ಎನಿಸಿಕೊಂಡಿದ್ದರು. ಬಳಿಕ ಸತತ 2 ವರ್ಷ ರೇಸ್ ಮುಕ್ತಾಯಗೊಳಿಸಿದ್ದರು. 2013ರ ಅಬುಧಾಬಿ ಡೆಸರ್ಟ್ ರೇಸ್‌ನಲ್ಲೂ ಸಂತೋಷ್ ಸಮಸ್ಯೆಗೆ ಸಿಲುಕಿದ್ದರು. ಸಂತೋಷ್ ಚಲಿಸುತ್ತಿದ್ದ ಸುಜಿಕಿ ಎಂಎಕ್ಸ್450ಎಕ್ಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಕುತ್ತಿಗೆ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದವು.
ಹೋದ ವರ್ಷದ ರ್‍ಯಾಲಿಯಲ್ಲಿ ಹೀರೊ ತಂಡದ ರೈಡರ್ ಪೌಲೊ ಗೋನ್ಸಾಲ್ವೆಸ್ ಸಾವು ಸಂಭವಿಸಿದ್ದ ಜಾಗದಲ್ಲಿ ಈ ಬಾರಿಯೂ ಮತ್ತೆ ದುರ್ಘಟನೆ ನಡೆದಿದೆ. ಪೌಲೊ ಮೃತಪಟ್ಟ ಬಳಿಕ ಹೀರೋ ಮೋಟೋಸ್ಪೋರ್ಟ್ ರೇಸ್‌ನಿಂದ ಹಿಂದೆ ಸರಿದಿತ್ತು.


