
ಶ್ರೀಹರಿಕೋಟಾ: ಭಾರತದ ಪ್ರಥಮ ಖಾಸಗಿ ಕಕ್ಷೀಯ ದರ್ಜೆಯ ರಾಕೆಟ್ ‘ವಿಕ್ರಮ್-1’ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ರಾಕೆಟ್, ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಬೆಳಿಗ್ಗೆ 11:30 ರ ಬದಲಿಗೆ ಮಧ್ಯಾಹ್ನ 12:05 ಕ್ಕೆ ನಭಕ್ಕೆ ಚಿಮ್ಮಿತು.
‘ಮಿಷನ್ ಆಗಮನ್’ ಹೆಸರಿನ ಈ ಪರೀಕ್ಷಾರ್ಥ ಪ್ರಯೋಗದಲ್ಲಿ, ಮೂರು ಘನ-ಇಂಧನ ಹಂತಗಳು ಹಾಗೂ ದ್ರವ ಕಕ್ಷೀಯ ಹೊಂದಾಣಿಕೆ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಐತಿಹಾಸಿಕ ರಾಕೆಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಕೈಬರಹದಲ್ಲಿ ‘ವಂದೇ ಮಾತರಂ’ ಎಂದು ಬರೆದಿರುವ ಪೋಸ್ಟ್ಕಾರ್ಡ್ ಸೇರಿದಂತೆ ಹೂಡಿಕೆದಾರರು ಹಾಗೂ ವಿಶ್ವದಾದ್ಯಂತದ ಬೆಂಬಲಿಗರ ಶುಭಾಶಯಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗಿದೆ. ದೇಶದ ವಾಣಿಜ್ಯ ಬಾಹ್ಯಾಕಾಶ ವಲಯದ ಈ ಮಹತ್ತರ ಮೈಲಿಗಲ್ಲನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, ಇದು ಭಾರತೀಯ ಯುವಕರ ಪ್ರತಿಭೆ ಮತ್ತು ಉದ್ಯಮಶೀಲತೆಯ ಪ್ರತಿಬಿಂಬ ಎಂದು ಬಣ್ಣಿಸಿದ್ದಾರೆ.


