
ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆ ಮತ್ತು ಎದೆನೋವಿನಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (85) ವಿಧಿವಶರಾಗಿದ್ದಾರೆ. ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.
ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚನ್ನಮ್ಮ ಅವರು 1954 ಮೇ 25ರಂದು ಹೆಚ್.ಡಿ. ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಹೆಚ್.ಡಿ. ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ, ಹೆಚ್.ಡಿ. ಕುಮಾರಸ್ವಾಮಿ, ಶೈಲಜಾ ಹಾಗೂ ಅನಸೂಯಾ ಸೇರಿ ಒಟ್ಟು ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಚನ್ನಮ್ಮ ದೇವೇಗೌಡರ ರಾಜಕೀಯ ಜೀವನದ ಬೆನ್ನೆಲುಬಿನಂತಿದ್ದು, ಸದಾ ಕಾಲ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ದೇವೇಗೌಡರಿಗೆ ಕುಟುಂಬದ ಹೊರೆ ಬೀಳದಂತೆ ಸಂಸಾರ ನಿಭಾಯಿಸುವ ಮೂಲಕ ಗಟ್ಟಿಗಿತ್ತಿ ಎನಿಸಿಕೊಂಡಿದ್ದರು. ಆರು ಮಕ್ಕಳನ್ನ ಸಲಹಿದ್ದಲ್ಲದೆ, ಅವರ ಶಿಕ್ಷಣದ ಜವಾಬ್ದಾರಿ ಹೊತ್ತು ಆದರ್ಶ ಗೃಹಿಣಿಯಾಗಿದ್ದರು.


