ಸಿನಿಮಾಗಳಲ್ಲಿ ನಾಯಕ ಚಲಿಸುವ ಕಾರಿನ ಮೇಲೆ ಜಿಗಿದು ಸಾಹಸ ಮಾಡೋದನ್ನ ನೋಡಿರ್ತೀರಾ. ಆದರೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಬ್ಬ ರಿಯಲ್ ಲೈಫ್ “ಸಿಂಗಂ” ಪೊಲೀಸ್ ಕಾನ್‌ಸ್ಟೇಬಲ್ ನಿಜವಾಗಿಯೂ ಇಂಥದ್ದೇ ಒಂದು ಸಾಹಸ ಮಾಡಿದ್ದಾರೆ!
ಬೆಂಗಳೂರಿನಿಂದ ಕೊಯಮತ್ತೂರಿಗೆ ಕಾರಿನಲ್ಲಿ ಸುಮಾರು 300 ಕೆಜಿ ನಿಷೇಧಿತ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಮಾಹಿತಿ ಸಿಗುತ್ತಿದ್ದಂತೆಯೇ ಕೋವಿಲ್‌ಪಾಳ್ಯಂ ಪೊಲೀಸರು ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಸ್ಮಗ್ಲರ್‌ಗಳು ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ.

ಆಗ ಕಾರ್ಯಪ್ರವೃತ್ತರಾದ ಹೆಡ್ ಕಾನ್‌ಸ್ಟೇಬಲ್ ವೇಲ್ಮುರುಗನ್, ತಮ್ಮ ಪ್ರಾಣದ ಹಂಗು ತೊರೆದು ವೇಗವಾಗಿ ಚಲಿಸುತ್ತಿದ್ದ ಕಾರಿನ ಬೊನೆಟ್ ಹಾಗೂ ಛಾವಣಿಯ ಮೇಲೆ ಜಿಗಿದಿದ್ದಾರೆ. ಆರೋಪಿಗಳು ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿದರೂ, ವೇಲ್ಮುರುಗನ್ ಬರೋಬ್ಬರಿ 40 ಕಿಲೋಮೀಟರ್‌ಗಳವರೆಗೆ ಕಾರಿನ ಮೇಲೆಯೇ ನೇತಾಡುತ್ತಾ ಕಳ್ಳರನ್ನು ಬಿಡದೆ ಬೆನ್ನಟ್ಟಿದ್ದಾರೆ.
ಅಂತಿಮವಾಗಿ ಸಬ್‌ಇನ್ಸ್‌ಪೆಕ್ಟರ್ ವಿಘ್ನೇಶ್ ನೇತೃತ್ವದ ಪೊಲೀಸ್ ತಂಡ ಅವಿನಾಶಿ ರಸ್ತೆಯಲ್ಲಿ ಕಾರನ್ನು ಸುತ್ತುವರಿದು, ರಾಜಸ್ಥಾನ ಮೂಲದ ಮೂವರು ಅಕ್ರಮ ಸಾಗಣೆದಾರರನ್ನು ಬಂಧಿಸಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾರ್ವಜನಿಕರ ರಕ್ಷಣೆಗೆ ನಿಂತ ಈ ಹೆಡ್ ಕಾನ್‌ಸ್ಟೇಬಲ್ ವೇಲ್ಮುರುಗನ್ ಅವರ ಧೈರ್ಯಕ್ಕೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ!


