
ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಸೆಕ್ಷನ್ 30(2)(a) ಹಾಗೂ 2011ರ ಆಹಾರ ಭದ್ರತೆ ನಿಯಮಾವಳಿಗಳ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಕಟ್ಟುನಿಟ್ಟಿನ ಆದೇಶವನ್ನು ಜಾರಿಗೆ ತಂದಿದ್ದಾರೆ. ಈ ನಿಷೇಧವು ತಕ್ಷಣದಿಂದಲೇ ಜಾರಿಗೆ ಬರಲಿದೆ.
ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕ ಸ್ಯಾಚೆಟ್‌ಗಳಲ್ಲಿ ನೀಡಿ, ನಂತರ ಗ್ರಾಹಕರು ಮಿಶ್ರಣ ಮಾಡಿ ಬಳಸುವಂತಹ ಉತ್ಪನ್ನಗಳಿಗೂ ಈ ನಿಯಮ ಅನ್ವಯಿಸಲಿದೆ. ಯಾವುದೇ ಹೆಸರಿನಲ್ಲಿ ಅಥವಾ ಪ್ಯಾಕೆಟ್‌ಗಳಲ್ಲಿ ಇಂತಹ ಅಪಾಯಕಾರಿ ಉತ್ಪನ್ನಗಳನ್ನು ಮಾರಾಟ ಮಾಡುವುದು, ಸಂಗ್ರಹಿಸುವುದು ಹಾಗೂ ಸಾಗಾಣಿಕೆ ಮಾಡುವುದು ಕಾನೂನಿನಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.


