ಉಡುಪಿ: ಉಡುಪಿ ಜಿಲ್ಲಾ ಪೊಲೀಸರು ಶಿರ್ವ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಅಂತರ್ ಜಿಲ್ಲಾ ಕಳ್ಳ ಅಬು ಬಕರ್ ಅಲಿಯಾಸ್ ಅಬ್ದುಲ್ ಖಾದರ್ ಎಂಬಾತನನ್ನು ಬಂಧಿಸಿದ್ದಾರೆ.
ಜೂನ್ 27, 2025 ರ ರಾತ್ರಿ ಶಿರ್ವದ ಮಟ್ಟಾರು ರಸ್ತೆಯ ಬಳಿ ಇರುವ ಪವಿತ್ರ ಪೂಜಾರ್ತಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮಹಿಳೆ ಮತ್ತು ಆಕೆಯ ಮಗ ಒಳಗೆ ಮಲಗಿದ್ದ ಸಮಯದಲ್ಲಿ ಆರೋಪಿಗಳು ಕಿಟಕಿಯನ್ನ ಮುರಿದು ಕೊಕ್ಕೆ ಮತ್ತು ರಾಡ್ ಬಳಸಿ ಬಾಗಿಲನ್ನು ಹೊಡೆದಿದ್ದಾರೆ. ನಂತರದಲ್ಲಿ ಒಳನುಗ್ಗಿದ ಕಳ್ಳನು ಸುಮಾರು 12.75 ಲಕ್ಷ ರೂ. ಮೌಲ್ಯದ ಸುಮಾರು 137 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲ ಪ್ರಕರಣ ದಾಖಲಾಗಿದ್ದು, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ಎಸ್. ನಾಯಕ್ ಮತ್ತು ಕಾರ್ಕಳ ಎಎಸ್ಪಿ ಡಾ. ಹರ್ಷ ಪ್ರಿಯಂವದ ಅವರ ನೇತೃತ್ವದಲ್ಲಿ, ಕಾಪು ವೃತ್ತ ನಿರೀಕ್ಷಕ ಜಯಶ್ರೀ ಎಸ್. ಮಾನೆ ನೇತೃತ್ವದ ತನಿಖಾ ತಂಡವು ಶೋಧ ನಡೆಸಿ ಅಬುಬಕರ್‌ನನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.


