ಮಹಾರಾಷ್ಟ್ರ: ಪ್ರಸಿದ್ಧ ಗೇಟ್ ವೇ ಆಫ್ ಇಂಡಿಯಾ ಬಳಿಯಿಂದ ಮುಂಬೈ ಕರಾವಳಿಯ ಎಲಿಫೆಂಟಾ ದ್ವೀಪಕ್ಕೆ ನೀಲಕಮಲ್ ಹೆಸರಿನ ದೋಣಿಯು 90ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದು, ಈ ಸಂದರ್ಭದಲ್ಲಿ ದೋಣಿಯು ಮಗುಚಿ ಬಿದ್ದಿದ್ದು, ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಇಂದು(ಡಿ.18) ಬುಧವಾರದಂದು ನಡೆದಿದ್ದು, ಘಟನೆಯಲ್ಲಿ ದೋಣಿಯಲ್ಲಿದ್ದ ಕೆಲವರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.
ನೀಲಕಮಲ್ ದೋಣಿಗೆ ನೌಕಾಪಡೆಯ ಸ್ಪೀಡ್ ಬೋಟ್ ವೇಗವಾಗಿ ಬಂದು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ದೋಣಿಯು ನೀರಿನಲ್ಲಿ ಮುಳುಗುತ್ತಾ ಮಗುಚಿಕೊಳ್ಳಲು ಶುರುವಾದಾಗ ದೋಣಿಯಲ್ಲಿದ್ದ ಬಹುತೇಕರನ್ನು ರಕ್ಷಿಸಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಕುರಿತಂತೆ, ‘ 3 ಮಂದಿ ನೌಕಾಪಡೆಯ ಸಿಬ್ಬಂದಿ ಸೇರಿದಂತೆ 10 ಮಂದಿ ಪ್ರಯಾಣಿಕರು ಸೇರಿದಂತೆ ದುರಂತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಕಾಣೆಯಾದವರು ಶೋಧಕಾರ್ಯ ಮುಂದುವರಿದಿದ್ದು, ನಾಪತ್ತೆಯಾದವರ ಹೆಚ್ಚಿನ ವಿವರ ನಾಳೆ ಬೆಳಗ್ಗೆ ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ಘೋಷಣೆಯಾಗಿದೆ.