Wednesday, July 15, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಅಂಗನವಾಡಿಯಲ್ಲಿ ಆಟಿಕೆಯ ನಡುವೆ ಅಡಗಿದ್ದ ಹಾವು ಕಚ್ಚಿ ನಾಲ್ಕು ವರ್ಷದ ಬಾಲಕಿ ಆಸ್ಪತ್ರೆಗೆ...

ಬೆಳ್ತಂಗಡಿ : ಅಂಗನವಾಡಿಯಲ್ಲಿ ಆಟಿಕೆಯ ನಡುವೆ ಅಡಗಿದ್ದ ಹಾವು ಕಚ್ಚಿ ನಾಲ್ಕು ವರ್ಷದ ಬಾಲಕಿ ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಳ್ತಂಗಡಿ : ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಹಾವು ಕಚ್ಚಿದ ಆತಂಕಕಾರಿ ಘಟನೆ ಜು.14 ರಂದು ಮಂಗಳವಾರ ನಡೆದಿದೆ. ಹಾವು ಕಚ್ಚಿದ ಪರಿಣಾಮ ಅಸ್ವಸ್ಥಗೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಹಾವು ಕಚ್ಚಿದ ಬಾಲಕಿಯನ್ನು ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಸಿಯಾಬ್ ಅವರ ಪುತ್ರಿ ಫಾತಿಮತ್ ಸಹದಿಯಾ(4) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ ಫಾತಿಮತ್ ಸಹದಿಯಾ ಎಂದಿನಂತೆ ಅಂಗನವಾಡಿಗೆ ತೆರಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ತರಗತಿ ಕೊಠಡಿಯೊಳಗೆ ಮಕ್ಕಳ ಆಟಿಕೆಗಳ ನಡುವೆ ಅಡಗಿದ್ದ ಹಾವು ಬಾಲಕಿಗೆ ಕಚ್ಚಿದೆ ಎನ್ನಲಾಗಿದೆ. ಹಾವು ಕಚ್ಚಿದ ತಕ್ಷಣ ಬಾಲಕಿ ಜೋರಾಗಿ ಅಳಲು ಆರಂಭಿಸಿದ್ದು, ಇದನ್ನು ಗಮನಿಸಿದ ಅಂಗನವಾಡಿ ಸಹಾಯಕಿ ಕೂಡಲೇ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಬಿ.ಎಲ್.ಓ. ಕರ್ತವ್ಯದ ನಿಮಿತ್ತ ಹೊರಗಡೆ ತೆರಳಿದ್ದರಿಂದ ಕೇಂದ್ರದಲ್ಲಿ ಸಹಾಯಕಿ ಮಾತ್ರ ಕರ್ತವ್ಯದಲ್ಲಿದ್ದರು ಎಂದು ತಿಳಿದುಬಂದಿದೆ.

ಬಾಲಕಿಯನ್ನು ತಕ್ಷಣ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಿದ್ದು, ಅಲ್ಲಿ ತುರ್ತು ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!