ಮಂಗಳೂರು: ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದು ವಂಚಿಸಿದ ಮಹಿಳೆಯ ವಿರುದ್ಧ ಕೇನರಾ ಬ್ಯಾಂಕ್ ಬ್ರ್ಯಾಂಚ್ ಮ್ಯಾನೇಜರ್ ದೂರು ನೀಡಿರುವ ಘಟನೆ ಮಂಗಳೂರಿನ ವೆಲೆನ್ಸಿಯಾ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಶಾಖಾ ಮ್ಯಾನೇಜರ್ ನವನೀತ್ ಕುಮಾರ್ ಪ್ರಭಾವತಿ ಪ್ರಭು ಎಂಬಾಕೆಯ ವಿರುದ್ಧ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಭಾವತಿ 2024ರ ಅ.22ರಂದು ಬ್ಯಾಂಕ್‌ಗೆ ಬಂದು ಚಿನ್ನಾಭರಣ ಅಡವಿಟ್ಟು 1.40 ಲ.ರೂ. ಅ.25ರಂದು 1.41 ಲ.ರೂ, ನ.21ರಂದು 1.44 ಲ.ರೂ, ನ.25ರಂದು 1.46 ಲ.ರೂ. ನ.29ರಂದು 2.98 ಲ.ರೂ. ಡಿ.3ರಂದು 2.96 ಲ.ರೂ. ಸಾಲ ಪಡೆದುಕೊಂಡಿದ್ದರು.
ಪ್ರಭಾವತಿ ಗಿರವಿಟ್ಟ ಚಿನ್ನಾಭರಣಗಳನ್ನು ಅಪ್ರೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಹರೀಶ್ ರಾಜ್ ಪರಿಶೀಲಿಸಿ ಮೌಲ್ಯಮಾಪನ ಮಾಡಿದ ಅನಂತರ ಚಿನ್ನಾಭರಣಗಳನ್ನು ಗಿರವಿ ಇರಿಸಿಕೊಂಡು ಸಾಲ ಮಂಜೂರು ಮಾಡಲಾಗಿತ್ತು. ಡಿ.6ರಂದು ಪ್ರಭಾವತಿ ಪ್ರಭು ಮತ್ತೆ ಚಿನ್ನಾಭರಣ ಅಡವಿಡಲು ಬಂದಾಗ ಈ ಹಿಂದೆ ಅಪ್ರೈಸರ್ ಆಗಿದ್ದ ಹರೀಶ್ ರಾಜ್ ಇರಲಿಲ್ಲ. ಹಾಗಾಗಿ ರಾಜೇಶ್ ಎಂಬ ಅಪ್ರೈಸರ್‌ನನ್ನು ಕರೆಯಿಸಿ ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿಸಿದಾಗ ಆ ಚಿನ್ನಾಭರಣಗಳು ನಕಲಿಯಾಗಿದ್ದುದು ಗೊತ್ತಾಗಿದೆ. ಇದರಿಂದ ಸಂಶಯ ಉಂಟಾಗಿ ಈ ಹಿಂದೆ ಪ್ರಭಾವತಿ ಪ್ರಭು ಅಡವಿಟ್ಟ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಅವುಗಳು ಕೂಡ ನಕಲಿಯಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ಪ್ರಭಾವತಿ ಪ್ರಭು ಅವರನ್ನು ಬ್ಯಾಂಕ್ ಮ್ಯಾನೇಜರ್ ಪ್ರಶ್ನಿಸಿದಾಗ ಅಡಮಾನವಿರಿಸಿದ ಚಿನ್ನಾಭರಣ ಸಂಬಂಧಿ ಸುನೀಲ್ ಕೆ. ಅವರ ಪತ್ನಿಯದ್ದಾಗಿದೆ. ಸುನೀಲ್ ಕೆ ತಿಳಿಸಿದಂತೆ ಅವುಗಳನ್ನು ಅಡಮಾನವಿರಿಸಿ ಸಾಲ ಪಡೆದು ಆ ಮೊತ್ತವನ್ನು ಸುನಿಲ್ ಕೆ.ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ. ಅನಂತರ ಆರೋಪಿಗಳಾದ ಪ್ರಭಾವತಿ ಪ್ರಭು ಮತ್ತು ಸುನೀಲ್ ಕೆ. ಈ ಹಿಂದೆ ಪಡೆದ ಸಾಲದಲ್ಲಿ 2.85 ಲ.ರೂ.ಗಳನ್ನು ಬ್ಯಾಂಕ್‌ಗೆ ಜಮೆ ಮಾಡಿದ್ದಾರೆ. 11.50 ಲ.ರೂ.ಗಳನ್ನು ಮರುಪಾವತಿಸಿಲ್ಲ ಎಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.