ರಾಷ್ಟ್ರಪತಿ ಚುನಾವಣೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಬೆಂಗಳೂರಿಗರ ಭಾನುವಾರದಂದು (ಜುಲೈ 10) ಆಗಮಿಸಲಿದ್ದು, ಅವರಿಗೆ ಭರ್ಜರಿ ಸ್ವಾಗತ ಕೋರಲು ರಾಜ್ಯ ಬಿಜೆಪಿ ಸಜ್ಜಾಗಿದೆ.
ಬಿಜೆಪಿ ಎಸ್‌ಟಿ ಮೋರ್ಚಾ, ಮುರ್ಮು ಅವರಿಗೆ ಆತ್ಮೀಯ ಸ್ವಾಗತ ಕೋರಲು ನಿರ್ಧರಿಸಿದ್ದು, ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ದ್ರೌಪದಿ ಮುರ್ಮು ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಕೋಲಾಟ ಸೇರಿದಂತೆ 20 ಆದಿವಾಸಿ ಕಲಾತಂಡಗಳಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ನಿರ್ಣಯ ಕೈಗೊಳ್ಳಾಗಿದೆ. ಈ ಕುರಿತು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ರಾಜ್ಯ ಎಸ್‌ಟಿ ಮೋರ್ಚಾದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕಾರ್ಯಕ್ರಮದ ಕುರಿತು ಮಾರ್ಗದರ್ಶನ ಮಾಡಿದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್ ಟಿ ಮೋರ್ಚಾ ರಾಜ್ಯ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್, ಲೋಕಸಭಾ ಸದಸ್ಯ ದೇವೇಂದ್ರಪ್ಪ, ಶಾಸಕರಾದ ರಾಜುಗೌಡ, ಸೋಮಲಿಂಗಪ್ಪ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು ಪಾಲ್ಗೊಂಡಿದ್ದರು. ಇನ್ನು ಮಹಿಳಾ ಮೋರ್ಚಾ ವತಿಯಿಂದ 2,500 ಮಹಿಳೆಯರು ಶಾಂಘ್ರಿಲಾ ಹೋಟೆಲ್ ಬಳಿ ಸೇರಿ ಅವರನ್ನು ಸ್ವಾಗತಿಸಲು ಮಹಿಳಾ ಮೋರ್ಚಾದ ಇನ್ನೊಂದು ಸಭೆಯು ನಿರ್ಧರಿಸಿತು.
ದೇವೇಗೌಡರನ್ನು ಭೇಟಿ ಮಾಡುತ್ತಾರಾ ಮುರ್ಮು? ಎನ್ನುವ ಪ್ರಶ್ನೆ ಹಲವರಲ್ಲಿ ಮೂಡುತ್ತಿದ್ದು, ಭಾನುವಾರ ಬೆಂಗಳೂರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈಗಾಗಲೇ ಜೆಡಿಎಸ್ ಪಕ್ಷ ಬಹಿರಂಗವಾಗಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದೆ. ಆದರೆ, ಭೇಟಿ ಅಗತ್ಯವಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು.
ಪ್ರಸ್ತುತ ಬೆಂಗಳೂರಿಗೆ ಆಗಮಿಸಲಿರುವ ಮುರ್ಮು ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದ್ದು, ಬಿಜೆಪಿ ಶಾಸಕರು ಮತ್ತು ಸಂಸದರ ಭೇಟಿ ಮುಗಿದ ನಂತರ, ಸಮಯ ಸಿಕ್ಕರೆ ಮತ್ತು ದೇವೇಗೌಡರು ಅವರಿಗೆ ಅವಕಾಶ ಕೊಟ್ಟರೆ ಭೇಟಿ ಮಾಡಬಹುದು ಎಂದು ಮೂಲಗಳಿಂದ ತಿಳುದುಬಂದಿರುತ್ತದೆ.


