ಬೆಳ್ತಂಗಡಿ: ತಾಲೂಕಿನಾದ್ಯಂತ ನ 14 ಆದಿತ್ಯವಾರ ವಿಪರೀತ ಮಳೆಯಾಗಿದ್ದು ಮದ್ಯಾಹ್ನ ಪ್ರಾರಂಭವಾದ ಅತಿಯಾದ ಮಳೆಯ ರಾತ್ರಿ ತನಕ ಎಡೆಬಿಡದೇ ಸುರಿದ ಪರಿಣಾಮ ಕೆಲವು ಕಡೆ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಈ ಸಂದರ್ಭ ರಸ್ತೆಯಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಯೊಬ್ಬರು ತನ್ನ ಸ್ಕೂಟರ್ ಮೂಲಕ ರಸ್ತೆ ದಾಟಲು ಯತ್ನಿಸುತಿದ್ದಾಗ ನೀರಿನ ರಭಸ ಅತಿಯಾಗಿ ಇದ್ದುದರಿಂದ ಸ್ಕೂಟರ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಇದೇ ಸಮಯದಲ್ಲಿ ಕಳೆದ ಎರಡು ದಿನಗಳ ಹಿಂದೆ ಗುಂಡ್ಯ ನದಿಯಲ್ಲಿ ಯುವಕನೊಬ್ಬ ಮುಳುಗಿದ್ದು ಇದರ ಕಾರ್ಯಾಚರಣೆ ಮುಗಿಸಿ ಊರಿಗೆ ವಾಪಸ್ಸಾಗುತಿದ್ದ ಬೆಳಾಲು ಉಜಿರೆ ಘಟಕದ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೈಕ್ ನ್ನು ಹಗ್ಗ ಕಟ್ಟಿ ಮೇಲೆ ಎತ್ತಿದ್ದಾರೆ.
ಸ್ಕೂಟರ್ ಸವಾರ ನಿಡ್ಲೆ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಸವಾರನ ವಿವರ ತಿಳಿದು ಬಂದಿಲ್ಲ. ಬೆಳಾಲು ಘಟಕದ ಸ್ವಯಂಸೇವಕರಾದ ಹರೀಶ್, ಯಶೋಧರ, ಸಂತೋಷ್, ರವೀಂದ್ರ ಸೇರಿದಂತೆ 06 ಸ್ವಯಂಸೇವಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಸ್ಪಂದನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.