Monday, July 27, 2026
Homeಕರಾವಳಿಮಂಗಳೂರುಮಂಗಳೂರು: 12 ವರ್ಷಗಳ ಬಳಿಕ ಸಿಕ್ತು ಗಂಗಾಧರ ಪಾಂಗಾಳ ಸಾವಿಗೆ ನ್ಯಾಯ: ಪ್ರಕರಣದ ನಾಲ್ವರು ಆರೋಪಿಗಳಿಗೆ...

ಮಂಗಳೂರು: 12 ವರ್ಷಗಳ ಬಳಿಕ ಸಿಕ್ತು ಗಂಗಾಧರ ಪಾಂಗಾಳ ಸಾವಿಗೆ ನ್ಯಾಯ: ಪ್ರಕರಣದ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

- Advertisement -
- Advertisement -

ಮಂಗಳೂರು: 12 ವರ್ಷಗಳ ಹಿಂದೆ ನಡೆದಿದ್ದ ಗಂಗಾಧರ ಪಾಂಗಾಳ ಅವರ ಕೊಲೆ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2014ರ ಮೇ 15ರಂದು ಪಣಂಬೂರು ಮೀನಕಳಿಯದಲ್ಲಿ ಗಂಗಾಧರ ಪಾಂಗಾಳ ಅವರನ್ನು ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಇದನ್ನು ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ, ತನಿಖೆಯಲ್ಲಿ ಇದೊಂದು ಪೂರ್ವ ನಿಯೋಜಿತ ಕೊಲೆ ಎಂಬುದು ಬಯಲಾಗಿತ್ತು. ಸತೀಶ್ ಬೈಕಂಪಾಡಿ ಎಂಬಾತನನ್ನು ಮೊಗವೀರ ಮಹಾಸಭಾದ ಸದಸ್ಯತ್ವದಿಂದ ಅಮಾನತುಗೊಳಿಸಿದ್ದಕ್ಕೆ ಗಂಗಾಧರ ಪಾಂಗಾಳ ಅವರೇ ಕಾರಣ ಎಂದು ದ್ವೇಷ ಸಾಧಿಸಿ, ಆರೋಪಿಗಳು ಕೃತ್ಯವೆಸಗಿದ್ದರು.

ಶಿಕ್ಷೆಯ ವಿವರ: ಆರೋಪಿಗಳಾದ ಸತೀಶ್ ಬೈಕಂಪಾಡಿ, ಹರೀಶ್ ಬೈಕಂಪಾಡಿ, ಭಾಸ್ಕರ್ ಬೈಕಂಪಾಡಿ ಮತ್ತು ಪುಷ್ಪರಾಜ್ ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ನಾಲ್ವರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ 15,000 ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 50,000 ರೂ.ಗಳನ್ನು ಮೃತನ ಮಗಳಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ ವಾಹನಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ನಿರ್ದೇಶಿಸಿದೆ. ಸರ್ಕಾರದ ಪರವಾಗಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದ ಮಂಡಿಸಿದ್ದರು.

- Advertisement -

Latest News

error: Content is protected !!