ಬಣಕಲ್: ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ವಾಹನ ನಿಲ್ಲಿಸದೆ ವೇಗವಾಗಿ ಚಾಲನೆ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷರ ವಾಹನ ಜಪ್ತಿ ಮಾಡಲಾಗಿದೆ.
ಬಣಕಲ್ ಠಾಣೆ ಪೊಲೀಸರು ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಮೂವರ ವಿರುದ್ಧ ಕೇಸು ದಾಖಲಿಸಿ ವಾಹನ ವಶಕ್ಕೆ ಪಡೆದಿದ್ದಾರೆ.
ಮಂಗಳೂರು ತಾಪಂ ಅಧ್ಯಕ್ಷ ಕೋಣಾಜೆಯ ಮಹಮ್ಮದ್, ವಾಹನದಲ್ಲಿದ್ದ ಮತ್ತಿಬ್ಬರ ವಿರುದ್ಧ ಕೇಸ್ ದಾಖಲಾಗಿದೆ. ಏಪ್ರಿಲ್ 14 ರಂದು ಬೆಳಗ್ಗೆ ತಾಲೂಕು ಪಂಚಾಯಿತಿ ಕರ್ನಾಟಕ ಸರ್ಕಾರ ಎಂಬ ನಾಮಫಲಕ ಇದ್ದ ವಾಹನ ಚಾರ್ಮಾಡಿ ಘಾಟ್ ಮಾರ್ಗವಾಗಿ ಕೊಟ್ಟಿಗೆಹಾರ ತಲುಪಿದೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದ್ದರೂ ಅದನ್ನು ಲೆಕ್ಕಿಸದೇ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಲಾಗಿದೆ. ನಂತರ ಅದೇ ಮಾರ್ಗದಲ್ಲಿ ವಾಹನ ವಾಪಸ್ ಬಂದಿದ್ದು ತಪಾಸಣೆಗೆ ವಾಹನ ನಿಲ್ಲಿಸಿಲ್ಲ.
ಕೊರೋನಾ ಸೋಂಕು ತಡೆ ಹಿನ್ನೆಲೆಯಲ್ಲಿ ಜಿಲ್ಲಾ ಗಡಿಗಳನ್ನು ಬಂದ್ ಮಾಡಲಾಗಿದೆ. ಮಂಗಳೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಚಿಕ್ಕಮಗಳೂರು ಜಿಲ್ಲಾ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ದರೂ, ತಪಾಸಣೆಗೆ ವಾಹನ ನಿಲ್ಲಿಸದೇ ನಿಯಮ ಉಲ್ಲಂಘಿಸಿದ ವಾಹನ ಚಾಲನೆ ಮಾಡಿದ ಹಿನ್ನಲೆಯಲ್ಲಿ ಕೇಸ್ ದಾಖಲಿಸಿ ವಾಹನ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗಿದೆ.