ಬಂಟ್ವಾಳ : ಲಾಕ್‍ಡೌನ್ ನೀತಿ ಸಂಹಿತೆ ಜಾರಿಯಾದ ನಂತರ ದೇವಸ್ಥಾನಗಳೂ ಬಾಗಿಲು ಮುಚ್ಚಿವೆ. ದೇಗುಲಕ್ಕೆ ಆಗಮಿಸುವ ಭಕ್ತಾಧಿಗಳಿಂದ ಆಹಾರ ಪಡೆಯುತ್ತಿದ್ದ ಪ್ರಾಣಿ ಪಕ್ಷಿಗಳಿಗೂ ಆಹಾರದ ಸಮಸ್ಯೆ ಕಾಡುತ್ತಿದೆ. ಕೆಲದಿನಗಳ ಹಿಂದೆ ಜಿಲ್ಲೆಯ ಮತ್ಸ್ಯ ತೀರ್ಥ ಶಿಶಿಲ ದೇವಸ್ಥಾನದ ದೇವರ ಮೀನುಗಳು ಆಹಾರವಿಲ್ಲದೆ ಹಪಹಪಿಸುತ್ತಿರುವ ಬಗ್ಗೆ ನಿಮ್ಮ ‘ಮಹಾ ಎಕ್ಸ್ಪ್ರೆಸ್’ ವಿಸ್ತೃತವಾದ ವರದಿ ಮಾಡಿತ್ತು.
ಇದೀಗ ಇತಿಹಾಸ ಪ್ರಸಿದ್ಧ ಭೂ ಕೈಲಾಸ ಖ್ಯಾತಿಯ ಪಾಂಡವರು ನಿರ್ಮಿತ ಕ್ಷೇತ್ರ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಮಂಗಗಳು ಆಹಾರವಿಲ್ಲದೆ ಸಂಕಷ್ಟದಲ್ಲಿದೆ.
ಇಲ್ಲಿಗೆ ಆಗಮಿಸುವ ಭಕ್ತರಿಗೆ ಈ ಕೋತಿಗಳ ಆಟ ನೋಡಿ ಸಂತಸ ಪಡದವರಿಲ್ಲ. ಹಣ್ಣುಕಾಯಿಯ ಬಾಳೆಹಣ್ಣು , ತೆಂಗಿಕಾಯಿಯೂ ಈ ವಾನರರಿಗೆ ಮೀಸಲು. ಒಮ್ಮೊಮ್ಮೆ ಮಕ್ಕಳು, ಮಹಿಳೆಯರ ಕೈಯಿಂದ ಬ್ಯಾಗ್ ಎಳೆದು ಆಹಾರಕ್ಕಾಗಿ ಕಾಡುವುದೂ ಉಂಟು! ಆದರೆ ಈಗ ಭಕ್ತರಿಲ್ಲದೆ ಈ ಕಪಿಗಳಿಗೆ ಆಹಾರದ ಕೊರತೆಯಾಗಿದೆ.
ಕ್ಷೇತ್ರದ ಆರಾಧ್ಯ ದೇವರ ನೈವೇದ್ಯ ಮಂಗಳಿಗೆ ಅರ್ಪಿತವಾಗುತ್ತದೆ. ಈ ವಾನರರಿಗೆ ಆಹಾರದ ಹರಕೆ ಹೇಳಿದರೆ ಕೋತಿಗಳ ಉಪದ್ರವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಪ್ರತೀ ಮಧ್ಯಾಹ್ನ ದೇವರಿಗೆ ಪೂಜೆಯಾದ ಬಳಿಕ ಮೂರು ಸೇರು ಅಕ್ಕಿಯ ದೇವರ ನೈವೇದ್ಯವನ್ನು ದೇವಾಲಯದ ಬಳಿ ಇರುವ ಕಲ್ಲಿನ ಮೇಲೆ ವಾನರರಿಗೆ ಆಹಾರವಾಗಿ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ನೂರಾರು ಮಂಗಗಳು ಹಾರಿ ಬಂದು ನೈವೇದ್ಯ ತಿನ್ನುತ್ತದೆ. ಈ ಹಿಂದೆ ಇಲ್ಲಿ ದೊಡ್ಡ ಕೋತಿಯೊಂದಿದ್ದು, ಕಾರಿಂಜದ ದಡ್ಡ ಎಂದೇ ಹೆಸರು ಪಡೆದಿತ್ತು.