Friday, May 10, 2024
Homeಕರಾವಳಿಉಡುಪಿನಿಯಮ ಮೀರಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಆರೋಪ: ಸಿಎಸ್‌ಪಿ ಪೊಲೀಸರಿಂದ ಕಾರ್ಯಾಚರಣೆ

ನಿಯಮ ಮೀರಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಆರೋಪ: ಸಿಎಸ್‌ಪಿ ಪೊಲೀಸರಿಂದ ಕಾರ್ಯಾಚರಣೆ

spot_img
- Advertisement -
- Advertisement -

ಉಡುಪಿ, ಮೇ 10: ಕೋವಿಡ್- 19 ಲಾಕ್‌ಡೌನ್ ಮಧ್ಯೆ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ನಿನ್ನೆ ತಡರಾತ್ರಿ ಪಾರ್ಟಿ ನಡೆಯುತ್ತಿದ್ದ ಆರೋಪದ ಮೇರೆಗೆ ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದ ದ್ವೀಪದಲ್ಲಿ ಏಳು ಮಂದಿ ಉಳಿದು ಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಇದರಲ್ಲಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಹಾಗೂ ನಿರ್ಮಿತಿ ಕೇಂದ್ರದ ಪ್ರಮುಖರು ಭಾಗಿಯಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ನಗರಸಭೆ ವಡಭಾಂಡೇಶ್ವರ ವಾರ್ಡ್‌ನ ಸದಸ್ಯ ಯೋಗೀಶ್ ಸಾಲ್ಯಾನ್ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದ್ವೀಪದಲ್ಲಿ ಮಾಂಸ, ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ದ್ವೀಪದಲ್ಲಿದ್ದ ಎಲ್ಲರನ್ನು ಕರಾವಳಿ ಕಾವಲು ಪಡೆಯ ಪೊಲೀಸರು ನಸುಕಿನ ವೇಳೆ ತೀರಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದ್ವೀಪಕ್ಕೆ ತೆರಳಿದವರ ಎರಡು ಕಾರುಗಳು ಪ್ರವಾಸಿ ಬೋಟುಗಳ ಜೆಟ್ಟಿಯ ಸಮೀಪ ಪತ್ತೆಯಾಗಿವೆ. ಅದರಲ್ಲಿ ಒಂದು ಕಾರು ಮಲ್ಪೆಬೀಚ್ ಅಭಿವೃದ್ಧಿ ಸಮಿತಿಯವರದ್ದಾದರೆ, ಇನ್ನೊಂದು ನಿರ್ಮಿತಿ ಕೇಂದ್ರದವರದ್ದು ಎಂಬುದು ತಿಳಿದುಬಂದಿದೆ. ಇವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.

ಶನಿವಾರ ರಾತ್ರಿ ವೇಳೆ ದ್ವೀಪದಲ್ಲಿ ದೀಪ ಉರಿಯುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಮಲ್ಪೆ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ. ಸುಮಾರು 11ಗಂಟೆ ಸುಮಾರಿಗೆ ದ್ವೀಪಕ್ಕೆ ತೆರಳಿದ ಕರಾವಳಿ ಕಾವಲು ಪಡೆಯ ಪೊಲೀಸರು, ದ್ವೀಪದಲ್ಲಿದ್ದ ಏಳು ಮಂದಿಯನ್ನು ವಿಚಾರಿಸಿದ್ದಾರೆ. ಆದರೆ ಅವರು, ಮಳೆಗಾಲ ಆರಂಭವಾಗುವುದರಿಂದ ಇಲ್ಲಿರುವ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಪರಿಕರಗಳನ್ನು ತೆಗೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದ್ದಾರೆ.

ವಾಪಾಸ್ಸು ಮರಳುವಾಗ ಅಲೆಯ ಅಬ್ಬರ ಹೆಚ್ಚಾದ ಕಾರಣ ನಾವೆಲ್ಲ ಇಲ್ಲಿಯೇ ಉಳಿದುಕೊಂಡಿದ್ದೇವೆ ಎಂದು ದ್ವೀಪದಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಕರಾವಳಿ ಕಾವಲು ಪಡೆಯ ಪೊಲೀಸರು, ಅನುಮತಿ ಇಲ್ಲದೆ, ನಿಯಮ ಉಲ್ಲಂಘಿಸಿ ದ್ವೀಪದಲ್ಲಿ ಪಾರ್ಟಿ ನಡೆಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಸಂಬಂಧ ಕರಾವಳಿ ಕಾವಲು ಪಡೆಯ ಪೊಲೀಸರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ತನಿಖೆ ನಡೆಸಿ ಕ್ರಮ: ಸಿಎಸ್‌ಪಿ ಎಸ್ಪಿ
‘ದ್ವೀಪದಲ್ಲಿ ಪಾರ್ಟಿ ಮಾಡುತ್ತಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ನಮ್ಮ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಏಳು ಮಂದಿ ಇರುವುದು ಕಂಡುಬಂದಿತ್ತು. ಅವರನ್ನು ರವಿವಾರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ಕರೆದುಕೊಂಡು ಬರಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಕಾನೂನು ಉಲ್ಲಂಘನೆಯಾಗಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕರಾವಳಿ ಕಾವಲು ಪಡೆಯ ಎಸ್ಪಿ ಆರ್.ಚೇತನ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ, ನಾನು ದ್ವೀಪಕ್ಕೆ ಹೋಗಿಲ್ಲ. ಐದು ಮಂದಿ ಕೆಲಸದವರು ಬೆಳಗ್ಗೆ ಅಲ್ಲಿರುವ ಪರಿಕರಗಳನ್ನು ತರಲು ಹೋಗಿದ್ದರು. ಸಂಜೆ ಅಲೆಗಳ ಅಬ್ಬರ ಹೆಚ್ಚಾ ಗಿರುವುದರಿಂದ ಅಲ್ಲೇ ಉಳಿದು ಮರುದಿನ ವಾಪಾಸ್ಸು ಬರಲು ನಿಶ್ಚಯಿಸಿದ್ದರು. ಅದು ಬಿಟ್ಟು ಅಲ್ಲಿ ಯಾವುದೇ ಪಾರ್ಟಿ ನಡೆದಿಲ್ಲ. ಇದೆಲ್ಲ ಸುಳ್ಳು ಆರೋಪ ಆಗಿದೆ. ಕೇವಲ ವದಂತಿಯಾಗಿದೆ. ಪೊಲೀಸರು ತನಿಖೆ ನಡೆಸಲಿ. ತಪ್ಪು ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವುದು ಮತ್ತು ರಾತ್ರಿ ಅಲ್ಲಿ ವಾಸ್ತವ್ಯ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ.

- Advertisement -
spot_img

Latest News

error: Content is protected !!