Monday, April 29, 2024
Homeಕರಾವಳಿವೇಣೂರಿನಲ್ಲಿ ಫೆ.22 ರಿಂದ ಮಹಾಮಸ್ತಕಾಭಿಷೇಕ ಆರಂಭ

ವೇಣೂರಿನಲ್ಲಿ ಫೆ.22 ರಿಂದ ಮಹಾಮಸ್ತಕಾಭಿಷೇಕ ಆರಂಭ

spot_img
- Advertisement -
- Advertisement -

ಉಜಿರೆ: ಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ, ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ,`ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿಗೆ ಫೆ.22ರಿಂದ ಮಾರ್ಚ್‌ 1ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ’ ಎಂದು ಹೇಳಿದರು.

ಸೋಮವಾರದಂದು ವೇಣೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೈನರ ಸಂಪ್ರದಾಯದಂತೆ ಪ್ರತಿ 12ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷರಾಗಿರುವ ವೇಣೂರಿನ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ಮಹಾಮಸ್ತಕಾಭಿಷೇಕ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ 30 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಒಂದೇ ಬಾರಿಗೆ ಒಂದು ಸಾವಿರ ಮಂದಿ ಊಟ ಮಾಡುವ ಸಭಾಭವನ, ಸ್ವ-ಸಹಾಯ ಪದ್ಧತಿಯಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೂವತ್ತು ಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಸ್ತಕಾಭಿಷೇಕಕ್ಕೆ ಬೇಕಾದ ಸಕಲದ್ರವ್ಯಗಳನ್ನು ಸಂಗ್ರಹಿಸಲಾಗಿದೆ. ಶುದ್ಧನೀರು, ಸೀಯಾಳ ನೀರು, ಇಕ್ಷುರಸ, ಅರಿಶಿಣ, ಗಂಧ, ಕೇಸರಿ, ಚಂದನ ಮೊದಲಾದ ಮಂಗಳದ್ರವ್ಯಗಳಿಂದ ಅಭಿಷೇಕ ನಡೆಸಲಾಗುವುದು. ಅಮೋಘಕೀರ್ತಿ ಮುನಿಮಹಾರಾಜರು ಮತ್ತು ಅಮರಕೀರ್ತಿ ಮುನಿಮಹಾರಾಜರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಇನ್ನು ರಾಜ್ಯಮಟ್ಟದ ವಸ್ತುಪ್ರದರ್ಶನದಲ್ಲಿ ಸರ್ಕಾರಿ ಇಲಾಖೆಗಳ ಮಳಿಗೆಗಳು ಸೇರಿ ಸುಮಾರು 200 ಮಳಿಗೆಗಳಿವೆ. ಕುಡಿಯುವ ನೀರು, ಶೌಚಾಲಯ, ವಾಹನಗಳ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ 1,300 ಕಾರು, 700 ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶವಿದೆ. ಸಂಚಾರ ಮತ್ತು ಭದ್ರತಾ ವಿಭಾಗದಲ್ಲಿ ಒಬ್ಬ ಡಿವೈಎಸ್‌ಪಿ., ಏಳು ಮಂದಿ ಸಿಪಿಐ, 12 ಪಿಎಸ್‌ಐ ಸೇರಿ 725 ಮಂದಿ ಪೊಲೀಸರು ಭದ್ರತೆ ಹಾಗೂ ಸಂಚಾರ ನಿಯಂತ್ರಣ ಮಾಡುವರು. ಸ್ಥಳೀಯ 5 ಶಾಲೆಗಳಲ್ಲಿ, ಖಾಸಗಿ ವಸತಿಗೃಹಗಳಲ್ಲಿ ವಸತಿವ್ಯವಸ್ಥೆ ಮಾಡಲಾಗಿದೆ. ಶಾಲಾ ಶಿಕ್ಷಕರನ್ನೂ ಮಸ್ತಕಾಭಿಷೇಕ ಸಮಿತಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದರು.

ವೇಣೂರಿನ ಸಂಪರ್ಕ ರಸ್ತೆಗಳ ದುರಸ್ತಿ ಮಾಡಲಾಗಿದ್ದು, ನಿರಂತರ ವಿದ್ಯುತ್‌ ಪೂರೈಕೆ ಹಾಗೂ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. 9 ದಿನಗಳಲ್ಲೂ ಬೆಳಿಗ್ಗೆ ಪೂಜಾ ವಿಧಿ-ವಿಧಾನಗಳು, ಜಿನಭಜನೆ, ಮಧ್ಯಾಹ್ನ 3ರಿಂದ ಸಭಾ ಕಾರ್ಯಕ್ರಮ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5.30ರಿಂದ ರಾತ್ರಿ 10ಗಂಟೆವರೆಗೆ ಮಸ್ತಕಾಭಿಷೇಕ ನಡೆಯುತ್ತದೆ. ಬಳಿಕ ದೂರದ ಊರುಗಳಿಗೆ ಹೋಗಲು ವಿಶೇಷ ಬಸ್‌ ಸೌಲಭ್ಯ ಮಾಡಲಾಗಿದೆ. ಕಲ್ಲುಬಸದಿ ವಠಾರದಲ್ಲಿ ಪ್ರವಚನ ಮಂದಿರ ನಿರ್ಮಾಣಕ್ಕೆ ಸರ್ಕಾರ 7 50 ಲಕ್ಷ ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು.

ಸಮಿತಿಯ ಪ್ರಧಾನಕಾರ್ಯದರ್ಶಿ ಪ್ರವೀಣ್‌ಕುಮಾರ್ ಇಂದ್ರ, ಕೋಶಾಧಿಕಾರಿ ಪಿ.ಜಯರಾಜ ಕಂಬಳಿ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!