ಬೆಳ್ತಂಗಡಿ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಲೋಕಾಯುಕ್ತ ಎಸ್‌ಪಿ ಸೈಮನ್ ಸಿ. ಎ. ಅವರು ಬುಧವಾರದಂದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸಾರ್ವಜನಿಕರ ಅಹವಾಲು ಸಭೆಯು ಬೆಳಿಗ್ಗೆ 11.30 ರಿಂದ 1ಗಂಟೆಯವರೆಗೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಜನರ ದೂರಿಗಾಗಿ ಮುಂದೆನೋಡುವ ಸ್ಥಿತಿ ಸೃಷ್ಟಿಯಾಯಿತು. ಅಹವಾಲು ಸ್ವೀಕರಿಸಲು ಅಧಿಕಾರಿಗಳು ಉಪಸ್ಥಿತರಿದ್ದರು ಜನರು ದೂರು ನೀಡಲು ಮುಂದೆ ಬರಲಿಲ್ಲ. ಇನ್ನು ಅಧಿಕಾರಿಗಳು ಭೇಟಿ ನೀಡುವ ಕುರಿತು ಜನರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಜನರಿಗೆ ಅಧಿಕಾರಿಗಳ ಭೇಟಿಯ ಮಾಹಿತಿ ಮಾಧ್ಯಮದ ಮೂಲಕ, ಅಥವಾ ಬ್ಯಾನರ್ ಅಳವಡಿಸುವ ಮುಖೇನ, ವಾಟ್ಸಾಪ್ ಗ್ರೂಪ್‌ಗಳ ಮೂಲಕ ತಿಳಿಯುವಂತೆ ಮಾಡಬೇಕು ಎಂದು ಈ ಸಮಯದಲ್ಲಿ ತಹಶೀಲ್ದಾರರಿಗೆ ಸೂಚಿಸಲಾಯಿತು.

ಇನ್ನು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 5 ಅಹವಾಲು ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ 2 ದೂರು ಸೇರಿ ಒಟ್ಟು 7 ಅರ್ಜಿಗಳನ್ನು ಸ್ವೀಕರಿಸಲಾಯಿತು. 4 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿ, ಉಳಿದಂತೆ ಮೂರು ಅರ್ಜಿಗಳಿಗೆ ಸಂಬಂಧಪಟ್ಟ ಇಲಾಖೆಯು ವರದಿ ನೀಡುವಂತೆ ಸೂಚಿಸಿ ಅಧಿಕಾರಿಗಳು ತೆರಳಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಚಲುವರಾಜು ಬಿ, ತಹಶೀಲ್ದಾರ್ ಸುರೇಶ್ ಕುಮಾರ್ ಟಿ.ಎಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಲೋಕಾಯುಕ್ತ ಕಚೇರಿ ಸಿಬ್ಬಂದಿ ಶರತ್, ವೈಶಾಲಿ ಹಾಗೂ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



