ಬೆಂಗಳೂರು: ಮುಂಬೈ ಸೇರಿದಂತೆ ದೇಶದ ಹಲವೆಡೆ ಲಾಕ್ಡೌನ್ನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮುಂಬೈ ಕನ್ನಡಿಗರು ಸೇರಿದಂತೆ ರಾಷ್ಟ್ರಾದ್ಯಂತ ಇರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕು. ಅವರ ಅಹವಾಲು ಕೇಳಲು ಟೋಲ್ ಫ್ರೀ ಸ್ಥಾಪಿಸಿ ದೂರುಗಳನ್ನು ಗಮನಿಸಿಬೇಕು. ಆಯಾ ರಾಜ್ಯಗಳ ವ್ಯಾಪ್ತಿಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿ, ಸಂತ್ರಸ್ತರಿಗೆ ತುರ್ತು ಆಹಾರ ಸಾಮಾಗ್ರಿಗಳು, ಔಷಧಿ ಮತ್ತು ಭದ್ರತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಗರ್ಭಿಣಿ ಮತ್ತು ಹೆತ್ತವರಿಂದ ದೂರವಿರುವ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಮಾಡಿ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು. ಈ ಮೂಲಕ ಅಂತರ್ ರಾಜ್ಯ ಗಡಿ ಭದ್ರತೆ ಗಮನದಲ್ಲಿಟ್ಟುಕೊಂಡು ಕನ್ನಡಿಗರಿಗೆ ರಕ್ಷಣೆ ಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.