Tuesday, June 23, 2026
Homeಕರಾವಳಿಕಾಸರಗೋಡುಕಾಸರಗೋಡು: ಗಂಡ ಹಾಗೂ ಅತ್ತೆಯ ಎದುರೇ ನವವಿವಾಹಿತೆ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣು

ಕಾಸರಗೋಡು: ಗಂಡ ಹಾಗೂ ಅತ್ತೆಯ ಎದುರೇ ನವವಿವಾಹಿತೆ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಾಸರಗೋಡು: ಗಂಡ ಹಾಗೂ ಅತ್ತೆಯ ಎದುರೇ ನವವಿವಾಹಿತೆ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಲಂನಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೂಲತಃ ಬದಿಯಡ್ಕದ ಚೆರ್ಲಡುಕ್ಕಂ ನಿವಾಸಿಯಾದ ಫಾತಿಮತ್ ಸುಫೈದಾ (24) ಮೃತ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಆದಿಲ್‌ನನ್ನು ವಿದ್ಯಾನಗರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.


ಪತಿ ಮತ್ತು ಅತ್ತೆಯ ಕಿರುಕುಳ ಅತಿಯಾದಾಗ ಮನನೊಂದ ಸುಫೈದಾ, ಅವರಿಬ್ಬರ ಮುಂದೆಯೇ ಆಸಿಡ್ ಸೇವಿಸಿದ್ದಾರೆ. ತಕ್ಷಣವೇ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯರಾತ್ರಿ 12.30 ರ ಸುಮಾರಿಗೆ ಆಕೆ ಕೊನೆಯುಸಿರೆಳೆದಿದ್ದಾರೆ.


ಮೃತಳ ಸಹೋದರ ಎಂ.ಕೆ. ಅಬ್ದುಲ್ ವಾಸಿಲ್ ಎ.ಕೆ. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಫಾತಿಮತ್ ಸುಫೈದಾ ಮತ್ತು ಆದಿಲ್ ಪರಸ್ಪರ ಪ್ರೀತಿಸಿ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸುಫೈದಾ ಧರಿಸಿದ್ದ ಚಿನ್ನದ ಆಭರಣಗಳಿಗಾಗಿ ಪತಿ ಮತ್ತು ಅತ್ತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು. ನಿರಂತರ ನಿಂದನೆ ಹಾಗೂ ದೌರ್ಜನ್ಯದಿಂದ ಬೇಸತ್ತೇ ಆಕೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಫೈದಾ ಅವರ ಸಾವಿನ ಸುತ್ತ ಹಲವು ಅನುಮಾನಗಳಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಆಕೆಯ ಸಂಬಂಧಿಕರು ಒತ್ತಾಯಿಸಿದ್ದಾರೆ. ಸದ್ಯ ವಿದ್ಯಾನಗರ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194 ರ ಅಡಿಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!