Friday, March 29, 2024
Homeಕ್ರೀಡೆಚೆನ್ನೈ ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್: ಭಾರತದ ವಿರುದ್ಧ ಇಂಗ್ಲೆಂಡ್ ಮೇಲುಗೈ

ಚೆನ್ನೈ ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್: ಭಾರತದ ವಿರುದ್ಧ ಇಂಗ್ಲೆಂಡ್ ಮೇಲುಗೈ

spot_img
- Advertisement -
- Advertisement -

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಮೊದಲ ದಿನದಾಟದಲ್ಲಿ ಆಂಗ್ಲರ ಪಡೆ ಮೇಲುಗೈ ಸಾಧಿಸಿದೆ. ನಾಯಕ ಜೋ ರೂಟ್ ಅವರ ಅಜೇಯ ಶತಕ ಹಾಗೂ ಆರಂಭಿಕ ಆಟಗಾರ ಡೊಮಿನಿಕ್ ಸಿಬ್ಲಿ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಮೊದಲ ದಿನ 3 ವಿಕೆಟ್ ನಷ್ಟಕ್ಕೆ 263 ರನ್ ಪೇರಿಸಿತು.

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ್ದ ರೋನಿ ಬರ್ನ್ಸ್ ಮತ್ತು ಡೊಮಿನಿಕ್ ಸಿಬ್ಲೆ ಜೋಡಿ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ದಾಂಡಿಗರು ಇಂಗ್ಲೆಂಡ್ ತಂಡಕ್ಕೆ ಅರ್ಧಶತಕದ ಜೊತೆಯಾಟ ಆಡಿ ಉತ್ತಮ ಆರಂಭ ನೀಡಿದರು. ತಂಡದ ಮೊತ್ತ 63 ರನ್ ಗಳಾಗಿದ್ದ ವೇಳೆ ದಾಳಿಗಿಳಿದ ಅಶ್ವಿನ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಬರ್ನ್ಸ್​ (33) ವಿಕೆಟ್ ಕೀಪರ್ ರಿಷಭ್ ಪಂತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಡೇನಿಯಲ್ ಲಾರೆನ್ಸ್ ಅವರನ್ನು ಶೂನ್ಯಕ್ಕೆ ಎಲ್​ಬಿಡಬ್ಲ್ಯೂಗೆ ಕೆಡವಿದ ಜಸ್​ಪ್ರೀತ್ ಬುಮ್ರಾ ಭಾರತಕ್ಕೆ 2ನೇ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಕ್ರೀಸ್ ಗೆ ಆಗಮಿಸಿದ ನಾಯಕ ಜೊ ರೂಟ್ , ಡೊಮಿನಿಕ್ ಸಿಬ್ಲೆ ಜೊತೆ ತಮ್ಮ ಹಿಂದಿನ ಫಾರ್ಮ್​ನ್ನು ಚೆನ್ನೈನಲ್ಲೂ ಮುಂದುವರೆಸಿದರು. ಪರಿಣಾಮ ಮೂರನೇ ವಿಕೆಟ್​ಗಾಗಿ ಭಾರತೀಯ ಬೌಲರುಗಳು ಪರದಾಡುವಂತಾಯಿತು.

ಇನ್ನು ಬುಮ್ರಾ ಮತ್ತು ಅಶ್ವಿನ್ ದಾಳಿಯಿಂದಾಗಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಮತ್ತು ಡೊಮಿನಿಕ್ ಸಿಬ್ಲೆ ನೆರವಾಗಿದ್ದರು. ಈ ಜೋಡಿ 3ನೇ ವಿಕೆಟ್ ಗೆ 200 ರನ್ ಗಳ ಅಮೋಘ ಜೊತೆಯಾಟವಾಡಿತು. ಪ್ರಮುಖವಾಗಿ ನಾಯಕ ಜೋ ರೂಟ್ ಭಾರತೀಯ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದರು. 197 ಎಸೆತಗಳಲ್ಲಿ ಅಜೇಯ 128 ರನ್ ಗಳಿಸಿದರು.

ಆದರೆ ದಿನದಾಟದ ಅಂತ್ಯದಲ್ಲಿ 87 ರನ್ ಗಳಿಸಿದ್ದ ಡೊಮಿನಿಕ್ ಸಿಬ್ಲೆ ಬುಮ್ರಾ ಎಸೆದ ದಿನದ ಅಂತಿಮ ಓವರ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಆ ಮೂಲಕ ದಿನದಾಟ ಅಂತ್ಯವಾಯಿತು. ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿದೆ. ಭಾರತದ ಪರ ಬುಮ್ರಾ 2, ಅಶ್ವಿನ್ ಒಂದು ವಿಕೆಟ್ ಪಡೆದರು.

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ ಮತ್ತು ಶಹಬಾಜ್ ನದೀಂ.

ಇಂಗ್ಲೆಂಡ್: ರೋರಿ ಬರ್ನ್ಸ್, ಡಾಮಿನಿಕ್ ಸಿಬ್ಲಿ, ಡ್ಯಾನಿಯಲ್ ಲಾರೆನ್ಸ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಒಲ್ಲಿ ಪಾಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡಾಮಿನಿಕ್ ಬೆಸ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡ್ರೆಸನ್.

- Advertisement -
spot_img

Latest News

error: Content is protected !!