Friday, May 10, 2024
Homeತಾಜಾ ಸುದ್ದಿಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿನ್ನೆ ಒಂದೇ ದಿನ 2,594 ಆಶ್ಲೇಷ ಬಲಿ ಪೂಜೆ: ವಸತಿ ಸಿಗದೇ ಭಕ್ತರ...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿನ್ನೆ ಒಂದೇ ದಿನ 2,594 ಆಶ್ಲೇಷ ಬಲಿ ಪೂಜೆ: ವಸತಿ ಸಿಗದೇ ಭಕ್ತರ ಪರದಾಟ

spot_img
- Advertisement -
- Advertisement -

ಕುಕ್ಕೆ ಸುಬ್ರಹಣ್ಯ: ಭಾನುವಾರದ ರಜಾ ದಿನ ಹಾಗೂ ಆಶ್ಲೇಷ, ಶುಕ್ಲ ಷಷ್ಠಿ ದಿನವಾಗಿದ್ದರಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ 60 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ವಿಶೇಷವಾಗಿ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಸೇವೆ ನೆರವೇರಿಸಿದರು. ಕ್ಷೇತ್ರದಲ್ಲಿ 2,594 ಆಶ್ಲೇಷ ಬಲಿ ಪೂಜೆ ನಡೆದಿದೆ. ಆಶ್ಲೇಷ ಬಲಿ ಪೂಜಾ ರಶೀದಿಗಾಗಿ ಮುಂಜಾನೆ 4 ಗಂಟೆಯಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂತು. ರಶೀದಿಗಾಗಿ ಸರ್ಕಾರಿ ಬಸ್‌ ನಿಲ್ದಾಣದಿಂದಲೇ ರಥ ಬೀದಿಯ ಮೂಲಕ ಭಕ್ತಾದಿಗಳ ಮಾರುದ್ದ ಸರತಿ ಸಾಲು ಕಂಡು ಬಂತು. ಕುಕ್ಕೆ ರಥ ಬೀದಿಯುದ್ದಕ್ಕೂ ಭಕ್ತರ ಸಂದಣಿ ಉಂಟಾಯಿತು. ಪ್ರವೇಶ ದ್ವಾರ, ದೇವಾಲಯದ ಹೊರಾಂಗಣ ಸೇರಿ ಕ್ಷೇತ್ರದ ಹಲವೆಡೆ ಭಕ್ತ ಜನಸಂದಣಿ ತುಂಬಿ ನೂಕು ನುಗ್ಗಲು ಕೂಡ ನಡೆಯಿತು.

ಶನಿವಾರ ಸಂಜೆಯಿಂದಲೇ ಕುಕ್ಕೆ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರಲಾರಂಭಿಸಿದ್ದರು. ಹೀಗಾಗಿ ಶನಿವಾರ ದೇವಳದ ಹಾಗೂ ಖಾಸಗಿ ವಸತಿ ಗೃಹಗಳು ಭರ್ತಿಯಾಗಿದ್ದವು. ಕೆಲವು ಭಕ್ತಾದಿಗಳಿಗೆ ವಸತಿ ವ್ಯವಸ್ಥೆ ಸಿಗದೆ ಆಗಮಿಸಿದ ತಮ್ಮ ವಾಹನಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿನ ಇಂಟರ್‌ ಲಾಕ್‌ನಲ್ಲಿ ಮಲಗಿ ರಾತ್ರಿ ಕಳೆಯುವಂತಾಯಿತು. ಕೆಲ ಭಕ್ತರು ವಸತಿ ಸಿಗದೆ ಕ್ಷೇತ್ರಕ್ಕೆ ಆಗಮಿಸಿ ರಥ ಬೀದಿಯಲ್ಲಿಯೇ ದೇವರಿಗೆ ನಮಸ್ಕರಿಸಿ ತಮ್ಮ ಊರುಗಳಿಗೆ ತೆರಳಿದ ಸನ್ನಿವೇಶ ಕೂಡ ನಡೆಯಿತು. ಕ್ಷೇತ್ರದಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿದ್ದು, ರಸ್ತೆ ಸಂಚಾರದಲ್ಲೂ ವಾಹನ ದಟ್ಟಣೆ ಕಂಡು ಬಂತು. ಪಾರ್ಕಿಂಗ್‌ ಜಾಗ ಭರ್ತಿಯಾಗಿ ಕುಮಾರ ಧಾರಾದಿಂದ ದೇವಸ್ಥಾನದವರೆಗೆ ಸುಮಾರು 2 ಕಿ. ಮೀ. ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡಲಾಗಿತ್ತು. ಪೊಲೀಸ್‌, ಗೃಹರಕ್ಷಕ ದಳದ ಸಿಬ್ಬಂದಿ ಸೂಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಂಚಾಂಗ ಪ್ರಕಾರ ಭಾನುವಾರ ಷಷ್ಠಿ ಮತ್ತು ಆಶ್ಲೇಷಾ ನಕ್ಷತ್ರ ಒಂದೇ ದಿನ ಬಂದಿರುವ ಕಾರಣ ಅನಂತ ಪದ್ಮನಾಭ, ಸುಬ್ರಹ್ಮಣ್ಯ, ನಾಗ ಕ್ಷೇತ್ರದಲ್ಲಿ ಭಾರಿ ಭಕ್ತ ಸಾಗರ ನೆರೆದಿತ್ತು.

ಮಂಗಳೂರಿನ ಕುಡುಪು ಶ್ರೀಅನಂತ ಪದ್ಮನಾಭ ಕ್ಷೇತ್ರ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕ್ಷೇತ್ರ, ಮಾಣೂರು ಶ್ರೀ ಅನಂತ ಪದ್ಮನಾಭ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಬೆಳಗ್ಗಿನಿಂದಲೇ ಭಕ್ತರ ಸಂಖ್ಯೆ ಹೆಚ್ಚಿತ್ತು. ಭಕ್ತಾದಿಗಳು ದೇವರಿಗೆ ಪಂಚಾಮೃತ ಅಭಿಷೇಕ, ನಾಗ ತಂಬಿಲ, ಆಶ್ಲೇಷ ಪೂಜೆ ಸೇರಿದಂತೆ ನಾನಾ ಸೇವೆಗಳನ್ನು ಅರ್ಪಿಸಿ ಕೃತಾರ್ಥರಾದರು. ಮಳೆ ಇಲ್ಲದ ಕಾರಣ ಭಕ್ತರಿಗೆ ಒಂದು ರೀತಿ ಅನುಕೂಲವಾಯಿತು. ದಿನ ವಿಶೇಷದ ಬಗ್ಗೆ ಕುಡುಪು ಅನಂತ ಪದ್ಮನಾಭ ಕ್ಷೇತ್ರದ ಕೃಷ್ಣರಾಜ ತಂತ್ರಿಗಳು ಮಾತನಾಡಿ, ಷಷ್ಠಿ ದಿನ ಮತ್ತು ಆಶ್ಲೇಷಾ ನಕ್ಷತ್ರ ಒಂದೇ ದಿನ ಬರುವುದು ಅಪರೂಪ. ಅದರಲ್ಲೂ ಈ ಬಾರಿ ಭಾನುವಾರ ಬಂದ ಕಾರಣ ಭಕ್ತರ ಸಂಖ್ಯೆ ಹೆಚ್ಚಿದೆ ಎಂದರು.

- Advertisement -
spot_img

Latest News

error: Content is protected !!