ಪಾಟ್ನಾ: ಕೇಂದ್ರ ಸರ್ಕಾರದ ಮಾಜಿ ಸಚಿವ ಡಾ ರಘುವಂಶ್ ಪ್ರಸಾದ್ ಸಿಂಗ್ ಇಂದು ನಿಧನರಾಗಿದ್ದಾರೆ. ಎದೆನೋವಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 74 ವರ್ಷದ ರಘುವಂಶ್ ಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನರೇಗಾ ಯೋಜನೆ ಹಿಂದಿನ ಶಕ್ತಿ ಎಂದೇ ಅವರನ್ನು ಕಾಣಲಾಗುತ್ತದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಲೋಕಸಭೆಗೆ ದಾಖಲೆಯ ಐದು ಬಾರಿ ಆಯ್ಕೆಯಾಗಿದ್ದ ವೈಶಾಲಿ ಕ್ಷೇತ್ರದಲ್ಲಿ ಕಳೆದ ಎರಡೂ ಚುನಾವಣೆಗಳಲ್ಲಿ (2014 ಮತ್ತು 2019) ಅವರು ಸೋಲು ಕಂಡಿದ್ದರು.
ಬಿಹಾರದ ಅಗ್ರ ನಾಯಕರಾಗಿ ಗುರುತಿಸಿಕೊಂಡಿದ್ದ ರಘುವಂಶ್ ಪ್ರಸಾದ್ ಸಿಂಗ್ ಗುರುವಾರವಷ್ಟೇ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‌ರಗೆ ಪತ್ರವೊಂದನ್ನು ಬರೆದು, ತಾನು ಆರ್‌ಜೆಡಿಗೆ ವಿದಾಯ ಹೇಳುವುದಾಗಿ ಘೋಷಿಸಿದ್ದರು. ಆದರೆ ಲಾಲೂ ಇದನ್ನ ತಿರಸ್ಕರಿಸಿ, ಮನವೊಲಿಸುವ ಯತ್ನ ನಡೆಸಿದ್ದರು. ಅಷ್ಟಾರಲ್ಲಾಗ್ಲೇ ಮಾಜಿ ಸಚಿವರು ಕೊನೆಯುಸಿರೆಳಿದಿದ್ದು ವಿಷಾದನೀಯ.
ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರ ನಿಧನವು ಬಿಹಾರ ರಾಜ್ಯದ ರಾಜಕೀಯ ಮತ್ತು ದೇಶದ ರಾಜಕೀಯ ಪರಂಪರೆಗೆ ತುಂಬಲಾರದ ನಷ್ಟ ಎಂದಿದ್ದಾರೆ.


