ಮಂಗಳೂರು: ತೆಂಗಿನ ಗೆರಟೆಯೆಂದರೆ ಯಾರಿಗೂ ಬೇಡವಾದ ತ್ಯಾಜ್ಯವೇ ಸರಿ. ಆದರೆ ಇಲ್ಲೊಬ್ಬರು ಜಾದೂಗಾರರು ತಮ್ಮ ಕೈಚಳಕದಿಂದ ಎಸೆಯಲ್ಪಡುವ ತೆಂಗಿನ ಗೆರಟೆಯಲ್ಲಿಯೇ ಸುಂದರ ಕಲಾಕೃತಿಯನ್ನು ರಚನೆ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

ಹೌದು.ವಿವಿಧ ಕಲಾಕೃತಿಗಳನ್ನು ಮಾಡಿರುವ ಇವರು ನಗರದ ಕಿನ್ನಿಗೋಳಿ ಸಮೀಪದ ಗೋಳಿಜೋರ ಎಂಬಲ್ಲಿನ ನಿವಾಸಿ ಲೋಲಾಕ್ಷ ಎಂಬ ಜಾದೂಗಾರರೊಬ್ಬರ ಕೈಯಲ್ಲಿ ತೆಂಗಿನ ಗೆರಟೆಯು ಸುಂದರ ಕಲಾಕೃತಿಯಾಗಿ ಜೀವಕಳೆ ತಳೆದಿದೆ. ಕೊರೊನಾ ಲಾಕ್ ಡೌನ್ ಒಂದಷ್ಟು ಕಾಲ ಎಲ್ಲರನ್ನೂ ಮನೆಯಲ್ಲಿಯೇ ಲಾಕ್ ಮಾಡಿತ್ತು. ಈ ಸಂದರ್ಭ ಅವರು ಕೈಕಟ್ಟಿ ಕೂರದೆ ಏನಾದರೂ ಮಾಡಬೇಕೆಂದು ಯೋಚನೆ ಮಾಡಿದ್ದಾರೆ. ಆಗ ಹೊಳೆದದ್ದೇ ತೆಂಗಿನ ಗೆರಟೆಯಲ್ಲಿ ಅವರಿಗೆ ಕಲಾಕೃತಿಗಳನ್ನು ಯಾಕೆ ಮಾಡಬಾರದೆಂದು ಆಲೋಚಿಸಿದ್ದಾರೆ. ಅದನ್ನು ಕಾರ್ಯಗತಗೊಳಿಸಲು ಗೆರಟೆಯಲ್ಲಿ ಕಲಾಕೃತಿಗಳನ್ನು ರಚಿಸುತ್ತಾ ಹೋಗಿದ್ದಾರೆ.

ಹೀಗೆ ಲೋಲಾಕ್ಷ ಅವರು ತೆಂಗಿನ ಗೆರಟೆಯಲ್ಲಿ ಮೀನು, ಆಮೆ, ದೀಪ, ಚಿಟ್ಟೆ, ಬುಟ್ಟಿ, ಟೀಕಪ್, ಸೈಕಲ್, ಸ್ಕೂಟರ್, ಗೂಬೆ ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ 75 ಕ್ಕೂ ಅಧಿಕ ಕಲಾಕೃತಿಗಳನ್ನು ರಚನೆ ಮಾಡಿದ್ದಾರೆ. ಅಲ್ಲದೆ ವಿವಿಧ ಬಗೆಯ ಸೌಟುಗಳನ್ನು ರಚಿಸಿದ್ದಾರೆ. ಲೋಲಾಕ್ಷ ಅವರು ವೃತ್ತಿಯಲ್ಲಿ ಬಿಎಸ್ಎನ್ಎಲ್ ನಲ್ಲಿ ಉದ್ಯೋಗಿಯಾಗಿದ್ದರು. ಪ್ರವೃತ್ತಿಯಲ್ಲಿ ಜಾದೂಗಾರ ಮಾತ್ರವಲ್ಲ ಮ್ಯಾಜಿಶಿಯನ್ಸ್ ಪರಿಕರಗಳನ್ನು ತಯಾರಿ ಮಾಡುತ್ತಿದ್ದರು. ನಿವೃತ್ತಿ ಸಂದರ್ಭದಲ್ಲಿಯೇ ಲಾಕ್ ಡೌನ್ ಉಂಟಾಗಿರುವುದರಿಂದ ಈ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸುತ್ತಾ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.

ವಿಶೇಷವೆಂದರೆ ಗೆರಟೆಗಳನ್ನು ಬೇಕಾದ ಆಕಾರಕ್ಕೆ ಕತ್ತರಿಸಲೂ ಇವರು ಯಾವುದೇ ತಾಂತ್ರಿಕ ಸಾಧನವನ್ನು ಬಳಸದೆ, ಸಣ್ಣಪುಟ್ಟ ಗರಗಸ, ಹ್ಯಾಕ್ಸೋಬ್ಲೇಡ್, ಅರ, ಕಟ್ಟರ್ ಬಳಸಿದ್ದಾರಂತೆ. ಈ ಕಲಾಕೃತಿಗಳ ರಚನೆಯಿಂದ ತಮ್ಮ ಮನಸ್ಸಿಗೆ ತೃಪ್ತಿ ನೀಡಿದೆ ಎನ್ನುತ್ತಾರೆ ಲೋಲಾಕ್ಷ.


