ಮಂಗಳೂರು: ದೆಹಲಿಯ ನಿಜಾಮುದ್ದೀನ್ ಮರ್ಕಝ್ ನಲ್ಲಿ ಕಡತಡಿಯ ವ್ಯಕ್ತಿಗಳಿಬ್ಬರು ಭಾಗಿಯಾಗಿರುವುದು ಇದೀಗ ಪತ್ತೆಯಾಗಿದೆ. ಮಂಗಳೂರು ಹೊರವಲಯದ ತೊಕ್ಕೋಟಿನಲ್ಲಿರುವ ಮಸೀದಿಯೊಂದರ ಅಧ್ಯಕ್ಷ ಹಾಗೂ ಮೌಲಿ ದೆಹಲಿಯಲ್ಲಿ ಮಾರ್ಚ್ 13ರಿಂದ 15ರವರೆಗೆ ನಡೆದೆ ಮರ್ಕಝ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಕೆಲ ದಿನಗಳ ಹಿಂದೆಯಷ್ಟೇ ಮಂಗಳೂರಿಗೆ ಬಂದಿದ್ದರು.
ಬಳಿಕ ಮಂಗಳೂರು ಹಾಗೂ ಆಸುಪಾಸಿನಲ್ಲಿ ತಿರುಗಾಟವನ್ನೂ ನಡೆಸಿದ್ದು, ಮನೆ ಮನೆಗೆ ದಿನಸಿ ಸಾಮಾಗ್ರಿಗಳನ್ನೂ ಪೂರೈಸುವ ಕಾರ್ಯದಲ್ಲಿ ನಿರತನಾಗಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ವಿದೇಶಗಳ ಸೇರಿದಂತೆ ದೇಶದ ಹಲವಡೆಯಿಂದ ಸುಮಾರು 3,500 ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಈ ಸಮ್ಮೇಳನದಲ್ಲಿ ಭಾಗವಹಿಸಿದ ನೂರಕ್ಕೂ ಮಿಕ್ಕಿದ ಜನರಲ್ಲಿ ಕೊರೊನಾ ರೋಗ ಲಕ್ಷಣಗಳು ಪತ್ತೆಯಾಗಿದ್ದು, ತಮಿಳುನಾಡು, ತೆಲಂಗಾಣ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಸಮಾವೇಶದಲ್ಲಿ ಭಾಗವಹಿಸಿದ 10 ಮಂದಿ ಕೊರೊನಾ ಪೀಡಿತರಾಗಿ ಮೃತಪಟ್ಟ ಘಟನೆಯೂ ನಡೆದಿದೆ.
ದೆಹಲಿಯಿಂದ ಬಂದ ತೊಕ್ಕೋಟಿನ ವ್ಯಕ್ತಿಗಳನ್ನು ಮನೆಯಲ್ಲೇ ಇರುವುದನ್ನು ಪತ್ತೆಹಚ್ಚಿನ ಪೋಲೀಸರು ಹಾಗೂ ಆರೋಗ್ಯಾಧಿಕಾರಿಗಳು ಮನೆಯಿಂದ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೊಕ್ಕೋಟಿನಲ್ಲಿ ಈ ವ್ಯಕ್ತಿಗಳು ಸೇರಿ ಸಾಮೂಹಿಕ ನಮಾಝ್ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು ಎನ್ನುವ ಮಾಹಿತಿ ಇದೀಗ ಪೋಲೀಸ್ ಮೂಲಗಳಿಂದ ಲಭ್ಯವಾಗಿದೆ.
ತಮ್ಮ ನೆರೆಹೊರೆಯವರಲ್ಲಿ/ಗೆಳೆಯರಲ್ಲಿ/ಸಂಬಂಧಿಕರಲ್ಲಿ ಯಾರದಾರೂ ನವದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ತಬ್ಳಿಕ್ ಜಮಾತಿನಲ್ಲಿ ಭಾಗವಹಿಸಿದವರು ಇದ್ದರೆ ದಯವಿಟ್ಟು ಜಿಲ್ಲಾಡಳಿತದ ಗಮನಕ್ಕೆ ತನ್ನಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಮಾಜ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.