ಕಡಬ: ಶನಿವಾರದಿಂದ ಝೀ ಕನ್ನಡದಲ್ಲಿ ಆರಂಭಗೊಂಡ ಕಾಮಿಡಿ ಕಿಲಾಡಿ ಸೀಸನ್ -4 ನಲ್ಲಿ ಕರಾವಳಿಯ ಅನೇಕ ಪ್ರತಿಭಾವಂತರು ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಕಡಬದ ಯುವಕ ದೀಕ್ಷಿತ್ ಕುಮಾರ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮೊದಲ ದಿನವೇ ಜಡ್ಜ್ ಗಳ ಮನಗೆದ್ದಿರುವ ದೀಕ್ಷಿತ್ ಅವರ ಮಿಮಿಕ್ರಿಗೆ ಕರ್ನಾಟಕದ ಜನ ಫಿಧಾ ಆಗಿದ್ದಾರೆ.
ಕಡಬ ತಾಲೂಕಿನ ಕುಂತೂರುಪದವು ಬೀರಂತಡ್ಕ ನಿವಾಸಿ ದಿ.ಕುಶಾಲಪ್ಪ ಗೌಡ ಮತ್ತು ದಮಯಂತಿ ದಂಪತಿ ಪುತ್ರರಾದ ಇವರು ಇಡಾಲ, ಪಡುಬೆಟ್ಟು ಶಾಲೆಗಳಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ, ರಾಮಕುಂಜದಲ್ಲಿ ಪಿಯುಸಿ ಶಿಕ್ಷಣ ಹಾಗೂ ಸುಬ್ರಹ್ಮಣ್ಯ ಪ್ರ.ದ.ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ.
ಬಾಲ್ಯದಲ್ಲಿಯೇ ನಟನೆಯ ಬಗ್ಗೆ ಆಸಕ್ತಿ ಹೊಂದಿರುವ ಇವರು ತುಳುನಾಟಕ, ಮಿಮಿಕ್ರಿಯಲ್ಲಿ ನಟನೆ ಮಾಡಿದ್ದರು. ಪದವಿ ಕಾಲೇಜಿನಲ್ಲಿ ಕುಸುಮ ಸಾರಂಗ ರಂಗಭೂಮಿ ನಾಟಕ ತಂಡ ಹಾಗೂ ಸಂಸ್ಕೃತಿ ಸೌರಭ ತಂಡದಲ್ಲಿ ಮಿಮಿಕ್ರಿ, ಡ್ಯಾನ್ಸ್ ಕಲಾವಿದರಾಗಿ ಹಲವು ನಾಟಕ, ಮಿಮಿಕ್ರಿ ಶೋದಲ್ಲಿ ಅಭಿನಯಿಸಿದ್ದಾರೆ. ಮುತ್ತೂಟ್ ಫಿನ್ ಕಾರ್ಫ್‌ನ ಸುಳ್ಯ ಶಾಖೆಯಲ್ಲಿ ಉದ್ಯೋಗದಲ್ಲಿದ್ದ ಇವರು ಬಳಿಕ ಬೆಂಗಳೂರಿನಲ್ಲಿ ಐಟಿ ಕಛೇರಿಯಲ್ಲಿ ಉದ್ಯೋಗದಲ್ಲಿದ್ದರು. ಕಾಮಿಡಿ ಕಿಲಾಡಿಗಳು ತಂಡಕ್ಕೆ ಆಯ್ಕೆಯಾದ ಬಳಿಕ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ.
ಝೀ ಕನ್ನಡ ಕನ್ನಡ ವಾಹಿನಿಯು ರಾಜ್ಯಾದ್ಯಂತ ಸುಮಾರು 16000 ಜನರನ್ನು ಆಡಿಷನ್ ಮಾಡಿದ್ದು ಮೂರು ಸುತ್ತಿನಲ್ಲಿ ಆಯ್ಕೆ ನಡೆಸಿದೆ. ಮಂಗಳೂರಿನಲ್ಲಿ ಒಂದು ಹಾಗೂ ಬೆಂಗಳೂರಿನಲ್ಲಿ ಎರಡು ಸುತ್ತಿನಲ್ಲಿ ಆಯ್ಕೆ ನಡೆಸಿ ಅಂತಿಮವಾಗಿ 16 ಜನರನ್ನು 4ನೇ ಸೀಸನ್‌ಗೆ ಆಯ್ಕೆ ಮಾಡಿದೆ. 16 ಜನರಲ್ಲಿ ಒಬ್ಬರು ಮಂಗಳೂರಿನವರು. ಇನ್ನೊಬ್ಬರು ದೀಕ್ಷಿತ್ ಕುಮಾರ್. ಇದೀಗ ಮೊದಲ ದಿನವೇ ದೀಕ್ಷಿತ್ ಸಾಕಷ್ಟು ಭರವಸೆ ಮೂಡಿಸಿದ್ದಾರೆ.