Thursday, June 4, 2026
Homeಕರಾವಳಿಬೆಳ್ತಂಗಡಿ : ಗೇರುಕಟ್ಟೆ ಕೆರೆಯಲ್ಲಿ ಸಿಕ್ಕಿದ ಮೃತದೇಹದ ಗುರುತು ಪತ್ತೆ; ಡಿಎನ್ಎ ಮೂಲಕ ಉಮರ್ ಫಾರೂಕ್...

ಬೆಳ್ತಂಗಡಿ : ಗೇರುಕಟ್ಟೆ ಕೆರೆಯಲ್ಲಿ ಸಿಕ್ಕಿದ ಮೃತದೇಹದ ಗುರುತು ಪತ್ತೆ; ಡಿಎನ್ಎ ಮೂಲಕ ಉಮರ್ ಫಾರೂಕ್ ಶವ ಎಂದು ದೃಢ

- Advertisement -
- Advertisement -

ಬೆಳ್ತಂಗಡಿ : ಗೇರುಕಟ್ಟೆ ತೋಟದ ಕೆರೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಪ್ರಕರಣ ಸಂಬಂಧಿಸಿದಂತೆ ಮೃತನ ಗುರುತನ್ನು ಡಿಎನ್ಎ ಮೂಲಕ ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಏನಿದು ಪ್ರಕರಣ?: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಚಂದ್ರಶೇಖರ್ ನಾಯ್ಕ್ ಎಂಬವರ ತೋಟದ ಕೆರೆಯಲ್ಲಿ 22-10-2024 ರಂದು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು. ಮೃತದೇಹವನ್ನು ಸ್ಥಳದಲ್ಲೇ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರಿಂದ ಶವಪರೀಕ್ಷೆ ನಡೆಸಿ 23-10-2024 ರಂದು ಕಳಿಯ ಗ್ರಾಮ ಪಂಚಾಯತ್ ಸಾರ್ವಜನಿಕ ದಫನ ಭೂಮಿಯಲ್ಲಿ ಪೊಲೀಸರು ದಫನ ಕಾರ್ಯ ಮಾಡಿದ್ದರು. ಈ ಸಂಬಂಧ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದ ಪೊಲೀಸರು ಮೃತದೇಹದ ಗುರುತನ್ನು ಮೂರು ತಿಂಗಳ ಬಳಿಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಉಮರ್ ಫಾರೂಕ್: ಅಪರಿಚಿತ ಶವ ಪತ್ತೆಯಾದ ಬಳಿಕ ಗೇರುಕಟ್ಟೆಯ ಉಮರ್ ಫಾರೂಕ್ ಎಂಬಾತ ತನ್ನ ಮಕ್ಕಳಿಗೆ ಕರೆ ಮಾಡಿದ ಹಾಗೂ ಮನೆಗೆ ಬಾರದೆ ಕಳೆದ ಎರಡು ತಿಂಗಳಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಮನೆಯವರಿಗೆ ಸ್ವಲ್ಪ ಮಟ್ಟಿಗೆ ಅನುಮಾನ ಬಂದು ಶವ ಪರಿಶೀಲನೆ ಮಾಡಿದ್ದರು. ಮೃತದೇಹದ ಬಟ್ಟೆ ನೋಡಿದಾಗ ಉಮರ್ ಫಾರೂಕ್ ಇರಬಹುದು ಎಂದು ಪೊಲೀಸರಿಗೆ ತಿಳಿಸಿದ್ದರು.

ಡಿಎನ್ಎ ಪರೀಕ್ಷೆ: ಉಮರ್ ಫಾರೂಕ್ ತಾಯಿ ಜೊಹರಬಿ ಅವರ ಮನವಿ ಮೇರೆಗೆ ಬೆಳ್ತಂಗಡಿ ಪೊಲೀಸರು ಡಿಎನ್ಎ ಮಾಡಲು ಬೆಳ್ತಂಗಡಿ ಕೋರ್ಟ್ ನಿಂದ ಅನುಮತಿ ಪಡೆದು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 20-11-2023 ರಂದು ಜೊಹರಬಿಯ ರಕ್ತವನ್ನು ಸಂಗ್ರಹಿಸಿ ಬೆಂಗಳೂರು ಮಡಿವಾಳದಲ್ಲಿರುವ ಎಫ್.ಎಸ್.ಎಲ್ ಕಚೇರಿಯ  ಡಿಎನ್ಎ ಸೆಂಟರ್ ಗೆ ಮೃತದೇಹದ ಸ್ಯಾಂಪಲ್ ಕೂಡ ಜೊತೆಯಲ್ಲಿ ಕಳುಹಿಸಿದ್ದರು. ಇದೀಗ ಡಿಎನ್ಎ ವರದಿ ಬೆಳ್ತಂಗಡಿ ಪೊಲೀಸರಿಗೆ ಕಳುಹಿಸಿದ್ದಾರೆ.

ಡಿಎನ್ಎ ಯಲ್ಲಿ ಉಮರ್ ಫಾರೂಕ್ ಮೃತದೇಹ ಧೃಡ: ಜೋಹಾರಬಿ ಅವರ ಡಿಎನ್ಎ ಮತ್ತು ಮೃತದೇಹದ ಸ್ಯಾಂಪಲ್  ನ ಡಿಎನ್ಎ ಮಾಡಿದ ಎಫ್.ಎಸ್.ಎಲ್ ವಿಭಾಗದ ಡಿಎನ್ಎ ಸೆಂಟರ್ ಅಧಿಕಾರಿಗಳು ಇಬ್ಬರದ್ದು ಒಂದೇ ರಕ್ತ ಅಗಿದ್ದು. ಜೊಹರಬಿ ಅವರ ಮಗ ಉಮರ್ ಫಾರೂಕ್ ಅವರದ್ದೆ ಮೃತದೇಹ ಎಂದು ವರದಿಯನ್ನು ನೀಡಿದ್ದಾರೆ.

ದಫನ ಮಾಡಿದ ಶವ ತೆಗೆದು ಮುಸ್ಲಿಂ ಸಂಪ್ರದಾಯದಂತೆ ಮತ್ತೆ ದಫನ: ಉಮರ್ ಫಾರೂಕ್ ಶವದ ಡಿಎನ್ಎ ವರದಿ ಬಂದಿದ್ದು, ಜ.27 ರಂದು  ಕುಟುಂಬ ಸದಸ್ಯರು ಪುತ್ತೂರು ಎಸಿ ಕಚೇರಿಗೆ ದಫನ ಮಾಡಿದ ಶವ ಮೇಲಕ್ಕೆತ್ತಿ ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮಸೀದಿಗೆ ತೆಗೆದುಕೊಂಡು ಹೋಗಿ ದಫನ‌ ಮಾಡಲು ಅವಕಾಶ ನೀಡಬೇಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರ ಸಮ್ಮುಖದಲ್ಲಿ ಶವ ತೆಗೆದು ಕುಟುಂಬಸ್ಥರಿಗೆ ಮುಂದಿನ ದಿನಗಳಲ್ಲಿ ಹಸ್ತಾಂತರಿಸಲಿದ್ದಾರೆ.

ಗಾಂಜಾ ಮತ್ತಿನಲ್ಲಿ ಸಾವನ್ನಪ್ಪಿರುವ ಶಂಕೆ: ಉಮರ್ ಫಾರೂಕ್ ಗಾಂಜಾ ವ್ಯಸನಿಯಾಗಿದ್ದು ಹಾಗೂ ಗಾಂಜಾ ಮಾರಾಟ ಕೂಡ ಮಾಡುತ್ತಿದ್ದ. ಈತ ಗಾಂಜಾ ನಶೆಯಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಬಚ್ಚಿಡಲು ಹೋಗಿ ದಾರಿ ತಪ್ಪಿ ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೂವರು ಪತ್ನಿಯರ ಮುದ್ದಿನ ಗಂಡ: ಉಮರ್ ಫಾರೂಕ್ ಒಟ್ಟು ಮೂವರನ್ನು ಮದುವೆಯಾಗಿದ್ದಾನೆ‌. ಮೊದಲು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ಝರೀನಾ ಳನ್ನು ಮದುವೆಯಾಗಿ ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದಾನೆ‌‌. ಬಳಿಕ ಆಕೆಯನ್ನು ಬಿಟ್ಟು ಮಂಗಳೂರು ಫರಂಗಿಪೇಟೆ ನಿವಾಸಿ ಸುಮಯ್ಯಳನ್ನು ಎರಡನೇ ಮದುವೆಯಾಗಿ ಒಂದು ಗಂಡು ಮಗುವನ್ನು ಕರುಣಿಸಿದ್ದಾನೆ. ಬಳಿಕ ಆಕೆಯನ್ನು ಬಿಟ್ಟು ಪುತ್ತೂರಿನ ತಸ್ಮೀಯಾಳನ್ನು ಮೂರನೇ ಮದುವೆಯಾಗಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಮನೆಯಲ್ಲಿ ಗಾಂಜಾ ದಸ್ತಾನು ಮಾಡಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿಸಿದ್ದಾಗಿ ಅನುಮಾನದಲ್ಲಿ ಮೂರನೇ ಪತ್ನಿ ತಸ್ಮೀಯಾಳನ್ನು ಮನೆಯಲ್ಲಿ ಈತ ಕೊಲೆ‌ ಮಾಡಿದ್ದಾನೆ ಎನ್ನಲಾಗಿದೆ.

ರೌಡಿಶೀಟರ್ ಉಮರ್ ಫಾರೂಕ್:  ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಕಜೆ ನಿವಾಸಿ ಕೆ.ಎ.ಅಬ್ದುಲಾ ಮತ್ತು ಜೋಹರಬಿ ದಂಪತಿಯ ಆರನೇ ಪುತ್ರ ಉಮರ್ ಫಾರೂಕ್.ಕೆ.ಎ (41) ಎಂಬಾತನು ಉತ್ತಮ ವಿದ್ಯಾಭ್ಯಾಸವನ್ನು ಮಾಡಿದ್ದ. ಮದುವೆಯಾದ ಬಳಿಕ ಮಂಗಳೂರಿಗೆ ಹೋಗಿ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಪುಂಡರ ಸಹವಾಸ ಮಾಡಿ ಗಾಂಜಾ ವ್ಯಸನಿಯಾಗಿದ್ದ. ಇದರಿಂದ ಪ್ರಕರಣಗಳಾಗಿ ರೌಡಿಶೀಟರ್ ಅಗಿದ್ದು ಇತನ ಮೂರನೇ ಪತ್ನಿಯ ಕೊಲೆ, ಗಾಂಜಾ ಪ್ರಕರಣ ಸೇರಿದಂತೆ ಇವನ ಮೇಲೆ ಸುಮಾರು 12 ಪ್ರಕರಣಗಳಿವೆ. ಈತ 2020 ರಲ್ಲಿ ತನ್ನ ಮೂರನೇ ಪತ್ನಿ ತಸ್ಮೀಯಾಳನ್ನು ಗೇರುಕಟ್ಟೆ ಮನೆಯಲ್ಲಿ ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ ಬಳಿಕ ಸಾಕ್ಷ್ಯಧಾರ ಕೊರತೆಯಿಂದ ಕೊಲೆ ಪ್ರಕರಣ ಖುಲಾಸೆಯಾಗಿತ್ತು.

- Advertisement -

Latest News

error: Content is protected !!