ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾಗೂ ಮಾರಕ ಕೊರೊನಾ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರ ಕಾರ್ಯಕ್ರಮಗಳು ವಿಧಾನಸೌಧಕ್ಕೆ ಶಿಫ್ಟ್ ಆಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯ ಪತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮಹಿಳೆ ಪೊಲೀಸ್ ಪೇದೆ ಕಳೆದ ಕೆಲ ದಿನಗಳಿಂದ ಗೃಹ ಕಚೇರಿ ಕೃಷ್ಣಾದಲ್ಲೇ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಸ್ಥಳದಲ್ಲಿ ಕೊರೊನಾ ಆತಂಕ ನಿರ್ಮಾಣವಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಾಗುತ್ತಿದ್ದು, ಗೃಹ ಕಚೇರಿಗೆ ಪ್ರವೇಶ ನಿರಾಕರಿಸಲಾಗಿದೆ. ಸಿಎಂ ಕಾರ್ಯಕ್ರಮಗಳನ್ನು ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿದ್ದು, ಈ ಕುರಿತಂತೆ ಅಧಿಕೃತ ಪ್ರಕಟಣೆಯನ್ನು ಪ್ರಕಟಿಸಲಾಗಿದೆ.
ಕೃಷ್ಣಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯ ಗಂಟಲು ದ್ರವ ಸಂಗ್ರಹಿಸಿ ನಿನ್ನೆ ಲ್ಯಾಬ್‌ಗೆ ಕಳಿಸಲಾಗಿತ್ತು. ಇಂದು ಕೊವಿಡ್ ಪರೀಕ್ಷೆಯ ವರದಿ ಬರುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೊರೊನಾ ಆತಂಕ ಸೃಷ್ಟಿಯಾಗಿದೆ.


