ಬೆಂಗಳೂರು: ಚೀನಾದ ಜವಳಿ ಉದ್ಯಮಿ ಪಾಲ್ ಪು ಅವರು ರಾಜ್ಯದಲ್ಲಿ ನೂರು ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಕರ್ನಾಟಕ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಜವಳಿ ಇಲಾಖೆ ಸಚಿವ ಶಿವಾನಂದ ಪಾಟೀಲ್ ಅವರನ್ನು ಭೇಟಿ ಮಾಡಿ ಉದ್ಯಮಿ ಪಾಲ್ ಪು ಚರ್ಚೆನಡೆಸಿದ್ದಾರೆ.
ಸೆಪ್ಟೆಂಬರ್‌ವರೆಗೆ ಕರ್ನಾಟಕದಲ್ಲೇ ಇದ್ದು, ಯೋಜನಾ ಸ್ಥಳ ಫೈನಲ್ ಮಾಡುವ ಉದ್ದೇಶ ಹೊಂದಿರುವ ಪಾಲ್ ಪು, ಮೊದಲ ಹಂತದಲ್ಲಿ ಹಳೆ ಮೈಸೂರು ಭಾಗದಲ್ಲಿ ಮತ್ತು ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದಾರೆ.
ಮೊದಲ ಹಂತದ ಯೋಜನೆಯಲ್ಲಿ 20 ಎಕರೆ ಭೂಮಿಯಲ್ಲಿ ನೂರು ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಐದು ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯ ಭರವಸೆಯನ್ನು ರಾಜ್ಯ ಸರ್ಕಾರಕ್ಕೆ ಚೀನಾ ಉದ್ಯಮಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಉದ್ಯಮ ಸ್ಥಾಪನೆಗೆ ಸೂಕ್ತವಾದ ಸ್ಥಳಗಳನ್ನು ಪಾಲ್ ಪು ಅವರಿಗೆ ತೋರಿಸಿ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಿ ಎಂದು ಜವಳಿ ಇಲಾಖೆ ಅಧಿಕಾರಿಗಳಿಗೆ ಸಚಿವ ಶಿವಾನಂದ ಪಾಟೀಲ್ ನಿರ್ದೇಶನ ನೀಡಿದ್ದಾರೆ.


