► ಬೆಳ್ತಂಗಡಿ ಸಂತೆ ತಾತ್ಕಾಲಿಕವಾಗಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರ
► ಎಪಿಎಂಸಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಹರೀಶ್ ಫೂಂಜ
► ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ
ಬೆಳ್ತಂಗಡಿ: ಪ್ರತಿ ಸೋಮವಾರ ಬೆಳ್ತಂಗಡಿ ಸಂತೆ ನಡೆಯುತ್ತಿದ್ದು ಕೊರೊನಾ ವೈರಸ್ ಆತಂಕದ ನಡುವೆ ಸಂತೆಮಾರುಕಟ್ಟೆಯಲ್ಲಿ ಅತೀ ಹೆಚ್ಚು ಜನ ಸೇರುತ್ತಿದ್ದು, ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಇರುವುದರಿಂದ ವಾರದ ಸಂತೆಯನ್ನು ತಾತ್ಕಾಲಿಕವಾಗಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸುವ ಕುರಿತು ಶಾಸಕ ಹರೀಶ್ ಫೂಂಜ ಅಧಿಕಾರಿಗಳ ಜತೆ ಭಾನುವಾರ ಎಪಿಎಂಸಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಸೂಚನೆಗಳನ್ನು ನೀಡಿದರು.
ಪ್ರತೀ ವಾರದ ಸಂತೆಯ ಸಂದರ್ಭ ಮಾರಾಟಗಾರರು ಮತ್ತು ಗ್ರಾಹಕರು ವೈಯಕ್ತಿಕ ಅಂತರವನ್ನೂ ಕಾಯ್ದುಕೊಳ್ಳದೇ ತಮಗೆ ಅಪಾಯವನ್ನು ಆಹ್ವಾನಿಸುವ ಜೊತೆಗೆ, ಸಮಾಜವನ್ನೂ ಕೊರೋನಾ ಭೀತಿಯೆಡೆಗೆ ತಳ್ಳುತ್ತಿದ್ದುದನ್ನು ಗಮನಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಅವರು ಭಾನುವಾರ ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ತಾಲೂಕಿನ ಸಂಬಂಧಿತ ಇಲಾಖಾಧಿಕಾರಿಗಳ ಸಭೆ ಕರೆದು, ಎಪ್ರಿಲ್ ೨೦ರ ಸೋಮವಾರದಿಂದ ಸಂತೆಯನ್ನು ಎ.ಪಿ.ಎಂ.ಸಿ. ಯಾರ್ಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ತೀರ್ಮಾನ ಕೈಗೊಂಡರು.
ಈ ಸಂದರ್ಭ ಮಾತನಾಡಿದ ಶಾಸಕರು, ವಾರದ ಸಂತೆಯಂದ ಯಾವುದೇ ತೊಂದರೆಗೊಳಗಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ವ್ಯಾಪಾರಸ್ಥರಿಗಳಿಗೆ ಪಟ್ಟಣ ಪಂಚಾಯಿತಿನಿಂದ ಸೂಚನೆ ನೀಡಲಾಗಿದೆ. ಸೋಮವಾರ ವಾರದ ಸಂತೆಯಂದು ತೆರೆದಿರುವ ಹಸಿ ಮೀನು, ಒಣ ಮೀನು, ತರಕಾರಿ, ಹಣ್ಣುಹಂಪಲು, ತಳ್ಳುಗಾಡಿ ಸೇರಿದಂತೆ ಎಲ್ಲಾ ಅಂಗಡಿಗಳು ಎ.ಪಿ.ಎಂ.ಸಿಗೆ ಸ್ಥಳಾಂತರಗೊಳ್ಳಲಿದೆ. ಎಪಿಎಂಸಿ ಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅಗತ್ಯ ವ್ಯವಸ್ಥೆ ಗಳನ್ನು ಮಾಡಲಾಗುವುದು. ಇಲ್ಲಿ ಜನರಿಗಾಗಿ ಶಾಮಿಯಾನಗಳನ್ನು ಹಾಕಲಾಗುವುದು, ಕುಡಿಯುವ ನೀರು,ಹಾಗೂ ಶೌಚಾಲಯಗಳ ವ್ಯವಸ್ಥೆ ಯನ್ನೂ ಮಾಡಲಾಗುವುದು. ಸಂತೆಗೆ ಆಗಮಿಸುವವರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ತಾತ್ಕಾಲಿಕವಾಗಿ ಇಲ್ಲಿ ರಿಕ್ಷಾ ನಿಲ್ದಾಣದ ವ್ಯವಸ್ಥೆ ಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಅವರು ಮಾಹಿತಿ ನೀಡಿ, ಎಲ್ಲಾ ವ್ಯಾಪಾರಿಗಳಿಗೆ ಮಾಹಿತಿ ನೀಡಲಾಗಿದೆ. ರಸ್ತೆ ಬದಿ ತರಕಾರಿ ಮಾರಾಟಗಾರರು ಇಲ್ಲಿಗೆ ಬರಲು ತಿಳಿಸಲಾಗಿದೆ. ಈ ಕುರಿತು ಸ್ಥಳದಲ್ಲಿ ಮಾಹಿತಿ ನಾಮಫಲವನ್ನು ಅಳವಡಿಸಲಾಗುತ್ತದೆ. ಸಾರ್ವಜನಿಕರಿಗೆ ಪಾರ್ಕಿಂಗ್ ಸೇರಿದಂತೆ ಖರೀದಿಗೆ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಸೂಕ್ತ ಮೂಲ ಸೌಕರ್ಯವನ್ನೂ ಒದಗಿಸಲಾಗುತ್ತದೆ. ಎ.೨೦ರಂದು ಎ.ಪಿ.ಎಂ.ಸಿ.ಯಲ್ಲೇ ವಾರದ ಸಂತೆ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಬೆಳ್ತಂಗಡಿ ಠಾಣೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಪ.ಪಂ. ಇಂಜಿನಿಯರ್ ಮಹಾವೀರ ಆರಿಗ ಉಪಸ್ಥಿತರಿದ್ದರು.