ಬೆಳ್ತಂಗಡಿ : ಪಾರ್ಕಿಂಗ್ ಜಾಗದಲ್ಲಿ ಪತ್ತೆಯಾಗಿದ್ದ ಮೂರು ಚಿನ್ನದ ಉಂಗುರದ ಬಗ್ಗೆ ಫೋಟೋ ಸಮೇತ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿಯನ್ನು ನೋಡಿ ಮಾಲೀಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ಸೂಕ್ತ ದಾಖಲೆಗಳನ್ನು ನೀಡಿ ಮರಳಿ ಪಡೆದುಕೊಂಡಿದ್ದಾರೆ.
ಚಿನ್ನದ ಉಂಗುರ ಪತ್ತೆ: ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಸಮಡೈನ್ ಹೋಟೆಲ್ ಮೇಲ್ಬಾಗದಲ್ಲಿರುವ ಮಾತೃಶ್ರೀ ಬಟ್ಟೆ ಅಂಗಡಿಗೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮ ಆಡಳಿತಾಧಿಕಾರಿ ಸಿದ್ದೇಶ್.ಟಿ ಮತ್ತು ಪತ್ನಿ ಐಶ್ವರ್ಯ ಬಟ್ಟೆ ಖರೀದಿಸಲು ಡಿ.27 ರಂದು ಸಂಜೆ ಹೋಗಿ ವಾಪಸ್ ಬಂದು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರನ್ನು ಹತ್ತುವ ಸಮಯದಲ್ಲಿ ಐಶ್ವರ್ಯ ಅವರಿಗೆ ಮೂರು ಚಿನ್ನದ ಉಂಗುರ ಬಿದ್ದಿರುವುದನ್ನು ನೋಡಿ ಅದು ಚಿನ್ನದ ಉಂಗುರ ಎಂದು ಖಚಿತವಾದ ಬಳಿಕ ನೇರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸಿದ್ದೇಶ್.ಟಿ ಮಾಲೀಕರನ್ನು ಪತ್ತೆ ಮಾಡಿ ನೀಡಲು ಹಸ್ತಾಂತರ ಮಾಡಿದ್ದರು.
ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿ ಪ್ರಸಾರ: ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ನಲ್ಲಿ ಮೂರು ಚಿನ್ನದ ಉಂಗುರಾದ ಫೋಟೋ ಸಮೇತ ಡಿ.27 ರಂದು ಸಂಜೆ 7:40 ಕ್ಕೆ ಸಂಪೂರ್ಣ ವರದಿಯನ್ನು ಬಿತ್ತರಿಸಿತ್ತು. ಈ ವರದಿ ಬೆಳ್ತಂಗಡಿಯಲ್ಲಿ ವೈರಲ್ ಆದ ಕೆಲವೇ ಹೊತ್ತಿನಲ್ಲಿ ಚಿನ್ನದ ಉಂಗುರ ಕಳೆದುಕೊಂಡಿದ್ದ ಮಾಲೀಕರು ಪತ್ತೆಯಾಗಿದ್ದಾರೆ.

ಚಿನ್ನದ ಉಂಗುರ ಕಳೆದುಕೊಂಡಿದ್ದ ದಂಪತಿ: ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಮಾತೃಶ್ರೀ ಬಟ್ಟೆ ಅಂಗಡಿಗೆ ಡಿ.27 ರಂದು ಸಂಜೆ ಕಾಶಿಬೆಟ್ಟು ನಿವಾಸಿ ರಾಧಕೃಷ್ಣ ಶೆಟ್ಟಿ ಮತ್ತು ವೈಶಾಲಿ ಬಟ್ಟೆ ಖರೀದಿಸಲು ಹೋಗುವಾಗ ವೈಶಾಲಿಯವರು ಕೈಯಲ್ಲಿ ಹಿಡಿದುಕೊಂಡು ಕಾರಿನ ಬಾಗಿಲು ತೆಗೆಯುವಾಗ ಮೂರು ಚಿನ್ನದ ಉಂಗುರ ಬಿದ್ದುಹೋಗಿತ್ತು. ಮನೆಗೆ ಹೋದ ಬಳಿಕ ಉಂಗುರ ನಾಪತ್ತೆಯಾದ ಬಗ್ಗೆ ವೈಶಾಲಿಯವರು ಪತಿಗೆ ವಿಷಯ ತಿಳಿಸಿದ್ದಾರೆ. ನಾಪತ್ತೆಯಾಗಿರುವ ಚಿನ್ನದ ಬಗ್ಗೆ ಭಯಗೊಂಡು ಹಲವೆಡೆ ಹುಡುಕಾಟ ನಡೆಸಿ ಕೊನೆಗೆ ಮಾತೃಶ್ರೀ ಬಟ್ಟೆ ಅಂಗಡಿಗೆ ರಾತ್ರಿ ಸಮಯದಲ್ಲಿ ಸಿಸಿಕ್ಯಾಮರ ಪರಿಶೀಲನೆಗೆ ರಾಧಕೃಷ್ಣ ಶೆಟ್ಟಿ ಮತ್ತು ಸ್ನೇಹಿತ ಪ್ರಶಾಂತ್ ರವರು ಉಂಗುರ ನಾಪತ್ತೆಯಾದ ಬಗ್ಗೆ ಮಾಲೀಕರಾದ ಮೋಹನ್ ಅವರಿಗೆ ವಿಷಯ ತಿಳಿಸಿದ್ದಾರೆ.

ಆ ವೇಳೆ ಮೊಬೈಲ್ ನಲ್ಲಿ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ನಲ್ಲಿ ಚಿನ್ನದ ಉಂಗುರ ಪತ್ತೆಯಾದ ಬಗ್ಗೆ ವರದಿಯಲ್ಲಿನ ಲಿಂಕ್ ನಲ್ಲಿದ್ದ ಫೋಟೋ ತೋರಿಸಿದಾಗ ವೈಶಾಲಿಯವರ ಚಿನ್ನದ ಉಂಗುರ ಎಂದು ಖಚಿತವಾಗಿದೆ.*ಪೊಲೀಸರಿಂದ ಮರಳಿ ಹಸ್ತಾಂತರ:* ರಾಧಕೃಷ್ಣ ಶೆಟ್ಟಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಡಿ.28 ರಂದು ಸೂಕ್ತ ದಾಖಲೆಗಳನ್ನು ತೋರಿಸಿ ಮೂರು ಚಿನ್ನದ ಉಂಗುರವನ್ನು ಪೊಲೀಸರಿಂದ ಮರಳಿ ಪಡೆದುಕೊಂಡಿದ್ದಾರೆ.
ಧನ್ಯವಾದ ಸಲ್ಲಿಸಿದ ದಂಪತಿಗಳು: ಚಿನ್ನದ ಉಂಗುರ ಪತ್ತೆಯಾದ ಬಳಿಕ ಮಾನವೀಯತೆಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿ ಮರಳಿ ಪಡೆಯುವಂತೆ ಮಾಡಿದ ಕೊಯ್ಯೂರು ಗ್ರಾಮ ಆಡಳಿತಾಧಿಕಾರಿ ಸಿದ್ದೇಶ್.ಟಿ ಮತ್ತು ಪತ್ನಿ ಐಶ್ವರ್ಯ ದಂಪತಿಗಳಿಗೆ ಮತ್ತು ಚಿನ್ನದ ಉಂಗುರ ಪತ್ತೆಯಾಗಿರುವ ಬಗ್ಗೆ ತಕ್ಷಣ ಮಾಹಿತಿ ಸಿಗುವಂತೆ ಫೋಟೋ ಸಮೇತ ವರದಿ ಪ್ರಸಾರ ಮಾಡಿದ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಹಾಗೂ ಬೆಳ್ತಂಗಡಿ ಪೊಲೀಸರಿಗೆ ರಾಧಕೃಷ್ಣ ಶೆಟ್ಟಿ ಮತ್ತು ವೈಶಾಲಿ ದಂಪತಿಗಳು ಅಭಿನಂದನೆ ಸಲ್ಲಿಸಿದ್ದಾರೆ.


