ಮಂಗಳೂರು: ಎಎಸ್ಐ ಮೈಗೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕದ್ರಿ ವ್ಯಾಸನಗರದಲ್ಲಿ ನಡೆದಿದೆ. ಪಾಂಡೇಶ್ವರ ಠಾಣೆಯ ಎಎಸ್ಐ ಹರಿಶ್ಚಂದ್ರ ಬೇರಿಕೆ ಆತ್ಮಹತ್ಯೆಗೆ ಯತ್ನಿಸಿದವರು.
ಕೇರಳದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದವರಾದ ಹರಿಶ್ಚಂದ್ರ ಅವರು ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಕಳೆದ 27 ವರ್ಷಗಳಿಂದ ಹಲವಾರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮೂರು ವರ್ಷಗಳ ಹಿಂದೆ ಕದ್ರಿ ವ್ಯಾಸನಗರದಲ್ಲಿ ಹೊಸ ಮನೆ ಮಾಡಿ ನೆಲೆಸಿದ್ದರು.
ಪತ್ನಿ ಮತ್ತು ಮಕ್ಕಳು ರಜೆಯ ಕಾರಣ ನಿನ್ನೆ ಊರಿಗೆ ತೆರಳಿದ್ದರು. ಬೆಳಗ್ಗೆ 10.30ರ ವೇಳೆಗೆ ಹಠಾತ್ ಮನೆಯ ಹೊರಗಡೆ ಎದುರು ಭಾಗದಲ್ಲಿ ಬೆಂಕಿ ಹತ್ತಿಕೊಂಡು ಬೊಬ್ಬೆ ಕೇಳಿದ್ದು ಪಕ್ಕದ ಮನೆಯವರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಮೈಯಲ್ಲಿದ್ದ ಅಂಗಿ ಸಹಿತ ಮೈ ಪೂರ್ತಿ ಸುಟ್ಟು ಹೋಗಿದೆ. ಕೂಡಲೇ ಮಾಹಿತಿ ಪಡೆದು ಕದ್ರಿ ಪೊಲೀಸರು ಮತ್ತು ಆಂಬುಲೆನ್ಸ್ ಬಂದಿದ್ದು ಅವರನ್ನು ಎಜೆ ಆಸ್ಪತ್ರೆಗೆ ಸೇರಿಸಲಾಗಿದೆ.
ಮನೆಯ ಹೊರಗಡೆ ಬಿಸ್ಲೆರಿ ನೀರಿನ ಬಾಟಲಿಯಲ್ಲಿ ಅರ್ಧ ಸುಟ್ಟು ಹೋದ ಸ್ಥಿತಿಯಲ್ಲಿ ಪೆಟ್ರೋಲ್ ತುಂಬಿರುವ ಕ್ಯಾನ್ ಪತ್ತೆಯಾಗಿದೆ. ನೀರು ಹಾಕಿದ್ದರಿಂದ ಕರಟಿ ಹೋದ ಬಾಟಲಿ ಸಹಿತ ಅದರಲ್ಲಿ ಅರ್ಧದಷ್ಟು ಪೆಟ್ರೋಲ್ ಉಳಿದಿದೆ. ಮೈಗೆ ಪೆಟ್ರೋಲ್ ಸುರಿದುಕೊಂಡ ಸಂದರ್ಭದಲ್ಲಿ ಎದುರು ಮನೆಯ ತಗಡು ಶೀಟಿಗೂ ಬಿದ್ದಿದೆ. ಬೆಂಕಿ ಅದಕ್ಕೂ ತಗಲಿದ್ದು ಶೀಟ್ ಸಹಿತ ಮನೆಯ ಫೈಬರ್ ಪೈಪ್ ಸುಟ್ಟು ಹೋಗಿದೆ. ನೆಲಹಾಸಿನ ಮ್ಯಾಟ್ ಕೂಡ ಸುಟ್ಟು ಹೋಗಿದೆ. ಕದ್ರಿ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.


