Saturday, November 28, 2026
Homeತಾಜಾ ಸುದ್ದಿಸುಪ್ರೀಂ ಕೋರ್ಟ್ ಆದೇಶದಂತೆ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಿದ ಭಕ್ತರು

ಸುಪ್ರೀಂ ಕೋರ್ಟ್ ಆದೇಶದಂತೆ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಿದ ಭಕ್ತರು

- Advertisement -
- Advertisement -

ಚೆನ್ನೈ, : ಕಳೆದ ಕೆಲವು ದಿನಗಳಿಂದ ತೀವ್ರ ಕಾನೂನು ಸಂಘರ್ಷ ಹಾಗೂ ವಿವಾದಕ್ಕೆ ಕಾರಣವಾಗಿದ್ದ ತಮಿಳುನಾಡಿನ ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯ ‘ದೀಪತ್ತೂಣ್’ ಕಲ್ಲು ಕಂಬದ ಮೇಲೆ ಶನಿವಾರ ಸಂಜೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸಲಾಯಿತು. ಸುಪ್ರೀಂ ಕೋರ್ಟ್ ನೇಮಿಸಿದ್ದ ಇಬ್ಬರು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಬಿಗಿ ಭದ್ರತೆಯ ನಡುವೆ ಈ ಧಾರ್ಮಿಕ ವಿಧಿವಿಧಾನವು ಸುಸೂತ್ರವಾಗಿ ನೆರವೇರಿತು.

ಸಂಜೆ 5 ಗಂಟೆಯ ಸುಮಾರಿಗೆ ಬೆಟ್ಟದ ಮೇಲಿನ ಕಲ್ಲು ಕಂಬದಲ್ಲಿ ಜ್ಯೋತಿ ಬೆಳಗುತ್ತಿದ್ದಂತೆ, ನೆರೆದಿದ್ದ ಭಕ್ತರು “ವೆಟ್ರಿವೇಲ್ ಮುರುಗನುಕ್ಕು ಹರೋಹರ” ಮತ್ತು “ವೆಟ್ರಿವೇಲ್, ವೀರವೇಲ್” ಎಂಬ ಜಯಘೋಷಗಳನ್ನು ಮೊಳಗಿಸಿ ಸಂಭ್ರಮಿಸಿದರು. ಈ ಮಹಾದೀಪವನ್ನು ಬೆಳಗಿಸಲು 30 ಕೆ.ಜಿ. ತುಪ್ಪ, 50 ಮೀಟರ್ ಉದ್ದದ ಹತ್ತಿಯ ಬತ್ತಿ ಹಾಗೂ 5 ಕೆ.ಜಿ. ಕರ್ಪೂರವನ್ನು ಬಳಸಲಾಯಿತು.

ನಿವೃತ್ತ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಪೂಜೆ: ಸುಪ್ರೀಂ ಕೋರ್ಟ್ ನಿಯೋಜಿಸಿದ್ದ ಮೇಘಾಲಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್. ವೈದ್ಯನಾಥನ್ ಮತ್ತು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಪಾರ್ಥಿಬನ್ ಅವರು ಶನಿವಾರ ಬೆಳಿಗ್ಗೆ ತಿರುಪ್ಪರಂಕುಂಡ್ರಂಗೆ ಆಗಮಿಸಿದ್ದರು. ಅರುಲ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿದ ನಂತರ, ನ್ಯಾಯಮೂರ್ತಿಗಳು ಮಂಗಳವಾದ್ಯಗಳೊಂದಿಗೆ ಮಣ್ಣಿನ ಹಣತೆ, ಬತ್ತಿ ಮತ್ತು ತುಪ್ಪವನ್ನು ಬೆಟ್ಟದ ಬುಡದವರೆಗೆ ತಂದು ಆಡಳಿತ ಮಂಡಳಿಗೆ ಒಪ್ಪಿಸಿದರು. ಬಳಿಕ ಬೆಟ್ಟದ ತುದಿಯ ಕಲ್ಲು ಕಂಬದ ಮೇಲೆ ಇರಿಸಲು ತಾಮ್ರದ ಕೊಪ್ಪರಿಗೆಯನ್ನು ಅರ್ಚಕರಿಗೆ ಹಸ್ತಾಂತರಿಸಿದರು.

ದೀಪೋತ್ಸವದ ಹಿನ್ನೆಲೆಯಲ್ಲಿ ಬೆಟ್ಟದ ಬುಡದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಬೆಟ್ಟವನ್ನು ಸಿಆರ್‌ಪಿಎಫ್ ತನ್ನ ಸುಪರ್ದಿಗೆ ತೆಗೆದುಕೊಂಡು ಹಲವೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಿತ್ತು. ಬೆಟ್ಟದ ಮೇಲೆ ದೀಪ ಬೆಳಗಿಸುವುದನ್ನು ವೀಕ್ಷಿಸಲು ಕೇವಲ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ದೀಪಸ್ತಂಭದ ಸಮೀಪ ತೆರಳಲು ಕೆಲವು ಭಕ್ತರು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರಾದರೂ, ಭದ್ರತಾ ಪಡೆಗಳು ಅವಕಾಶ ನೀಡಲಿಲ್ಲ. ತುರ್ತು ಪರಿಸ್ಥಿತಿಗಾಗಿ ವೈದ್ಯಕೀಯ ತಂಡಗಳು ಹಾಗೂ ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧವಾಗಿಡಲಾಗಿತ್ತು.

ವಿವಾದದ ಹಿನ್ನೆಲೆ: ನವೆಂಬರ್ 20ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಒಂದು ಬಾರಿಯ ಕ್ರಮವಾಗಿ ಬೆಟ್ಟದ ತುದಿಯ ‘ದೀಪತ್ತೂಣ್’ ಕಂಬದ ಮೇಲೆ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿತ್ತು. ಆದರೆ, ನವೆಂಬರ್ 24ರಂದು ನಡೆದ ಹಬ್ಬದ ವೇಳೆ ನ್ಯಾಯಾಲಯದ ನಿರ್ದೇಶನದ ಬದಲಾಗಿ ದೇವಸ್ಥಾನದ ಸಾಂಪ್ರದಾಯಿಕ ಉಚ್ಚಿಪಿಳ್ಳೈಯಾರ್ ಮಂಟಪದಲ್ಲಿ ದೀಪ ಬೆಳಗಿಸಲಾಗಿತ್ತು.

ತನ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಶುಕ್ರವಾರ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ, ದೇವಸ್ಥಾನದ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿ, ಬೆಟ್ಟದ ಭದ್ರತೆಯನ್ನು ಸಿಆರ್‌ಪಿಎಫ್‌ಗೆ ಹಸ್ತಾಂತರಿಸಿ ಶನಿವಾರ ದೀಪ ಬೆಳಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.

- Advertisement -

Latest News

error: Content is protected !!