Saturday, November 28, 2026
Homeತಾಜಾ ಸುದ್ದಿಮುಸ್ಲಿಂ ಗೆಳೆಯನ ಮಗನ ಚೇತರಿಸಿದಕ್ಕೆ ಹರಕೆ ತೀರಿಸಲು ಶಬರಿಮಲೆಗೆ ಪಾದಯಾತ್ರೆ ಹೊರಟ ಹಿಂದೂ ಸ್ನೇಹಿತ!

ಮುಸ್ಲಿಂ ಗೆಳೆಯನ ಮಗನ ಚೇತರಿಸಿದಕ್ಕೆ ಹರಕೆ ತೀರಿಸಲು ಶಬರಿಮಲೆಗೆ ಪಾದಯಾತ್ರೆ ಹೊರಟ ಹಿಂದೂ ಸ್ನೇಹಿತ!

- Advertisement -
- Advertisement -

ಕೇರಳ: ಧರ್ಮದ ಎಲ್ಲೆಗಳನ್ನು ಮೀರಿದ ಅಪರೂಪದ ಸ್ನೇಹ, ನಂಬಿಕೆ ಮತ್ತು ಭಾವೈಕ್ಯತೆಗೆ ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ನ ಸಾಕ್ಷಿಯಾಗಿದೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಪಾರ್ಶ್ವವಾಯುವಿಗೆ ತುತ್ತಾಗಿದ್ದ ತಮ್ಮ ಮುಸ್ಲಿಂ ಗೆಳೆಯನ ಮಗ ಗುಣಮುಖನಾದ ಹಿನ್ನೆಲೆಯಲ್ಲಿ, ಹಿಂದೂ ವ್ಯಕ್ತಿಯೊಬ್ಬರು ತಾವು ಹೊತ್ತಿದ್ದ ಹರಕೆಯನ್ನು ತೀರಿಸಲು ಪೆರಿಂಥಲ್ಮನ್ನದಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಪೆರಿಂಥಲ್ಮನ್ನ ನಿವಾಸಿ ಪ್ರಮೋದ್ ಎಂಬುವವರೇ ಈ ಮಾನವೀಯ ಮೌಲ್ಯ ಮೆರೆದವರು. ವಿಶೇಷವೆಂದರೆ, ಇವರ ಆಪ್ತ ಸ್ನೇಹಿತ ನಜರ್ ಮನು ಅವರು ಪ್ರಮೋದ್ ಅವರ ತಲೆಯ ಮೇಲೆ ಪವಿತ್ರ ‘ಇರುಮುಡಿ ಕಟ್ಟು’ ಇರಿಸುವ ಮೂಲಕ ಈ ಸೌಹಾರ್ದಯುತ ಯಾತ್ರೆಗೆ ಚಾಲನೆ ನೀಡಿದ್ದು, ಎಲ್ಲರ ಗಮನ ಸೆಳೆದಿದೆ.

ಕಳೆದ 16 ವರ್ಷಗಳಿಂದ ಪ್ರಮೋದ್ ಮತ್ತು ನಜರ್ ಮನು ಆಪ್ತ ಸ್ನೇಹಿತರು. ಸುಮಾರು ಏಳು ತಿಂಗಳ ಹಿಂದೆ ನಜರ್ ಮನು ಅವರ 20 ವರ್ಷದ ಪುತ್ರ ಹಮ್ದಾನ್ ಪ್ರಯಾಣಿಸುತ್ತಿದ್ದ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಮ್ದಾನ್ ಪಾರ್ಶ್ವವಾಯುವಿಗೆ (Paralysis) ತುತ್ತಾಗಿದ್ದರು. ಆತನ ಸ್ಥಿತಿಯನ್ನು ಕಂಡಿದ್ದ ವೈದ್ಯರು, ಹಮ್ದಾನ್ ಮತ್ತೆ ಸಾಮಾನ್ಯ ಜೀವನಕ್ಕೆ ಮರಳುವ ಬಗ್ಗೆ ಭರವಸೆ ಕಳೆದುಕೊಂಡಿದ್ದರು.

ಗೆಳೆಯನ ಕುಟುಂಬ ಅನುಭವಿಸುತ್ತಿದ್ದ ನೋವನ್ನು ಕಂಡು ಮರುಗಿದ್ದ ಪ್ರಮೋದ್, ಹಮ್ದಾನ್ ಸಂಪೂರ್ಣವಾಗಿ ಗುಣಮುಖನಾದರೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಪಾದಯಾತ್ರೆ ಬರುವುದಾಗಿ ಹರಕೆ ಹೊತ್ತಿದ್ದರು. ತಿಂಗಳುಗಳ ನಿರಂತರ ಚಿಕಿತ್ಸೆ ಹಾಗೂ ಪ್ರಾರ್ಥನೆಯ ಫಲವಾಗಿ ಪವಾಡಸದೃಶ ರೀತಿಯಲ್ಲಿ ಚೇತರಿಸಿಕೊಂಡಿರುವ ಹಮ್ದಾನ್, ಇದೀಗ ಮತ್ತೆ ನಡೆಯಲು ಆರಂಭಿಸಿದ್ದಾರೆ.

ಗೆಳೆಯನ ಮಗನ ಚೇತರಿಕೆಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಪ್ರಮೋದ್ ಅವರು ತಮ್ಮ ಇತರ ಸ್ನೇಹಿತರೊಂದಿಗೆ ಸೇರಿ ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದಾರೆ. ಈ ಭಾವೈಕ್ಯತೆಯ ಯಾತ್ರೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!