
ಮಂಗಳೂರು: ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿ ನಡುವೆ ಫಲ್ಗುಣಿ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ವೇಳೆ ಶುಕ್ರವಾರ ಅವಘಡ ಸಂಭವಿಸಿದೆ. ಸೇತುವೆಗೆ ಗರ್ಡರ್ ಅಳವಡಿಸುವಾಗ ಕ್ರೇನ್ ನಿಯಂತ್ರಣ ತಪ್ಪಿ ನದಿಗೆ ಪಲ್ಟಿಯಾಗಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ತಣ್ಣೀರುಬಾವಿ ಸಮೀಪ 31 ಮೀಟರ್ ಉದ್ದದ ಗರ್ಡರ್ ಅಳವಡಿಸಲು ಎರಡು ಕ್ರೇನ್ಗಳನ್ನು ಬಳಸಲಾಗುತ್ತಿತ್ತು. ಈ ವೇಳೆ ಒಂದು ಕ್ರೇನ್ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿದೆ. ಅದರಲ್ಲಿದ್ದ ಗರ್ಡರ್ ಸುಮಾರು 10 ಮೀಟರ್ ಎತ್ತರದಿಂದ ಪಕ್ಕದಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್ ಮೇಲೆ ಬಿದ್ದಿದೆ.
ಘಟನೆಯಲ್ಲಿ ಕ್ರೇನ್ ಆಪರೇಟರ್ ಮತ್ತು ರಿಗ್ಗರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗಳಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರ್ಡರ್ ಬಿದ್ದ ಪರಿಣಾಮ ಬೋಟ್ ಹಾನಿಗೀಡಾಗಿ ಅರ್ಧ ಭಾಗ ನೀರಿನಲ್ಲಿ ಮುಳುಗಿದೆ. ಬೋಟ್ನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಭಾರವಾದ ಗರ್ಡರ್ ಎತ್ತುವ ಸಂದರ್ಭದಲ್ಲಿ ಕೆಳಭಾಗದ ಮಣ್ಣು ಸಡಿಲಗೊಂಡಿದ್ದರಿಂದ ಕ್ರೇನ್ ಪಲ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
64 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 64 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗುತ್ತಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಬೋ-ಸ್ಟ್ರಿಂಗ್ ಮಾದರಿಯ ಸೇತುವೆಯಾಗಿದೆ. ಸುಮಾರು 285ರಿಂದ 300 ಮೀಟರ್ ಉದ್ದದ ಸೇತುವೆಯಲ್ಲಿ 100 ಮೀಟರ್ ಬೋ-ಸ್ಟ್ರಿಂಗ್ ಭಾಗ ಇರಲಿದೆ. ಮೀನುಗಾರಿಕಾ ಬೋಟ್ಗಳ ಸಂಚಾರಕ್ಕೆ ಅನುಕೂಲವಾಗುವಂತೆ ನದಿಯ ಉಬ್ಬರದ ಮಟ್ಟದಿಂದ 10 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ.


