Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಎಸ್ ಡಿಎಂ ಅನುದಾನಿತ ಸೆಕಂಡರಿ ಶಾಲೆಯಲ್ಲಿ 2003–2006ನೇ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಬೆಳ್ತಂಗಡಿ; ಎಸ್ ಡಿಎಂ ಅನುದಾನಿತ ಸೆಕಂಡರಿ ಶಾಲೆಯಲ್ಲಿ 2003–2006ನೇ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ; SDM Secondary School Ujire ಶಾಲೆಯ 2003–2006ನೇ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ “ಮೆಲುಕು” ಸಂಭ್ರಮ ಹಾಗೂ ಆತ್ಮೀಯತೆಯ ವಾತಾವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ವಿದೇಶ ಹಾಗೂ ರಾಜ್ಯದ ಹೊರಭಾಗಗಳಲ್ಲಿ ವಾಸಿಸುತ್ತಿರುವ ಸ್ನೇಹಿತರೊಂದಿಗೆ 20 ವರ್ಷದ ಸಿಹಿ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಯಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 10ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ “ಮೆಲುಕು” ಲೋಗೋ ಅನಾವರಣ, ಗುರುಗಳಿಗೆ ಸನ್ಮಾನ ಹಾಗೂ ಸ್ಮರಣಿಕೆ ವಿತರಣೆ ನಡೆಯಿತು. ಹಳೆಯ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಗುರುಗಳಿಗೆ ಗೌರವ ಸೂಚಕವಾಗಿ ಸ್ಮರಣಿಕೆಗಳನ್ನು ನೀಡಿ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಶಾಲೆಗೆ ವಿಶೇಷ ಸ್ಮರಣಿಕೆಯನ್ನು ಅರ್ಪಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಸಂಕಲ್ಪವನ್ನೂ ಹಳೆಯ ವಿದ್ಯಾರ್ಥಿಗಳು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಗಣಿತ ಶಿಕ್ಷಕರಾದ ಸದಾಶಿವ ಪೂಜಾರಿ (ಮುಖ್ಯ ಅತಿಥಿ), ಸಮಾಜ ವಿಜ್ಞಾನ ಶಿಕ್ಷಕಿ ಕಲಾವತಿ, ವಿಜ್ಞಾನ ಶಿಕ್ಷಕರಾದ ರವೀಶ್, ಪದ್ಮರಾಜ್ ಹಾಗೂ ಸುರೇಶ್, ಚಿತ್ರಕಲೆ ಶಿಕ್ಷಕರಾದ ಶ್ರೀರಾಮ್, ಹಿಂದಿ ಶಿಕ್ಷಕರಾದ ರಮೇಶ್ ಮಯ್ಯ ಹಾಗೂ ಕನ್ನಡ ಶಿಕ್ಷಕರಾದ ಯುವರಾಜ್ ಉಪಸ್ಥಿತರಿದ್ದು ವಿದ್ಯಾರ್ಥಿಗಳೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಹಳೆಯ ಶಾಲಾ ದಿನಗಳನ್ನು ನೆನಪಿಸುವ ಹಲವು ಮನರಂಜನಾ ಚಟುವಟಿಕೆಗಳು, ಸ್ನೇಹಿತರ ಪರಿಚಯ, ಹಾಸ್ಯಭರಿತ ಆಟಗಳು, ಹಾಡುಗಳು ಹಾಗೂ ನೆನಪು ಹಂಚಿಕೆ ಕಾರ್ಯಕ್ರಮಗಳು ಎಲ್ಲರಲ್ಲೂ ಸಂಭ್ರಮ ಮೂಡಿಸಿತು. ಸ್ನೇಹಿತರು ಶಾಲಾ ದಿನಗಳ ತಮಾಷೆಯ ಘಟನೆಗಳನ್ನು ಹಂಚಿಕೊಂಡು ನಗುವಿನ ಅಲೆ ಹರಿಸಿದರು.

ಇದೇ ವೇಳೆ ನಮ್ಮನ್ನು ಅಗಲಿದ ಸ್ನೇಹಿತರು ಹಾಗೂ ಶಿಕ್ಷಕರ ಶಾಂತಿಗಾಗಿ ಸ್ಮರಣೆ ಸಲ್ಲಿಸಲಾಯಿತು. ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

“ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮ ಬ್ಯಾಚ್‌ನ ಕನಸಾಗಿತ್ತು. ಅದನ್ನು ‘ಮೆಲುಕು’ ಕಾರ್ಯಕ್ರಮದ ಮೂಲಕ ಸಾಕಾರಗೊಳಿಸಿದ್ದೇವೆ” ಎಂದು ಹಳೆಯ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ವಿದ್ಯಾಶ್ರೀ ಬಿ.ಎಸ್. ನಿರೂಪಿಸಿದರು. ಇಸ್ಮಾಯಿಲ್ ಫಾರೂಕ್ ಸ್ವಾಗತಿಸಿದರು. ರಕ್ಷಿತಾ ವಂದನಾರ್ಪಣೆ ಸಲ್ಲಿಸಿದರು.ಸ್ನೇಹ, ಗುರುಭಕ್ತಿ ಹಾಗೂ ಸಮಾಜಮುಖಿ ಚಿಂತನೆಗಳ ಸಮನ್ವಯದೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

- Advertisement -

Latest News

error: Content is protected !!