Sunday, April 28, 2024
Homeಕ್ರೀಡೆಐಪಿಎಲ್‌ ಅಂಗಳಕ್ಕೂ ಕಾಲಿಟ್ಟ ಕೊರೊನಾ : ಬಿಸಿಸಿಐ ವೈದ್ಯಕೀಯ ತಂಡದ ಸದಸ್ಯನಿಗೆ ಕೋವಿಡ್-19

ಐಪಿಎಲ್‌ ಅಂಗಳಕ್ಕೂ ಕಾಲಿಟ್ಟ ಕೊರೊನಾ : ಬಿಸಿಸಿಐ ವೈದ್ಯಕೀಯ ತಂಡದ ಸದಸ್ಯನಿಗೆ ಕೋವಿಡ್-19

spot_img
- Advertisement -
- Advertisement -

ನವದೆಹಲಿ: ಐಪಿಎಲ್-2020 ಸಲುವಾಗಿ ಯುಎಇಗೆ ತೆರಳಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವೈದ್ಯಕೀಯ ತಂಡದ ಸದಸ್ಯರೊಬ್ಬರಿಗೆ ಕೋವಿಡ್‌-19 ದೃಢಪಟ್ಟಿದೆ ಎಂದು ಮಂಡಳಿಯ ಮೂಲಗಳು ಖಚಿತಪಡಿಸಿವೆ.

ಈ ಬಗ್ಗೆ ಮಾತನಾಡಿರುವ ಮಂಡಳಿಯ ಹಿರಿಯ ಸದಸ್ಯರೊಬ್ಬರು, ‘ಇದು ಸತ್ಯ. ಆದರೆ, ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಸದ್ಯ ಅವರು ಯಾರೊಂದಿಗೂ ಸಂಪರ್ಕದಲ್ಲಿಲ್ಲ. ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಯುಎಇಗೆ ಪ್ರಯಾಣಿಸುವ ಸಂದರ್ಭದಲ್ಲಿ ಸೋಂಕು ತಗುಲಿರಬಹುದು’ ಎಂದು ತಿಳಿಸಿದ್ದಾರೆ.

ಮುಂದುವರಿದು, ‘ಸೋಂಕಿತರ ಮೇಲೆ ನಿಗಾ ಇರಿಸಲಾಗಿದ್ದು, ಮುಂದಿನ ಸಲ ಮಾದರಿ ಪರೀಕ್ಷೆ ನಡೆಸುವ ವೇಳೆಗೆ ಗುಣಮುಖರಾಗುವ ವಿಶ್ವಾಸವಿದೆ. ಜೊತೆಗೆ ಎನ್‌ಸಿಎಯಲ್ಲಿರುವ ಇಬ್ಬರಿಗೂ ಸೋಂಕು ದೃಢಪಟ್ಟಿದ್ದು, ಅವರನ್ನೂ ಪ್ರತ್ಯೇಕವಾದಲ್ಲಿ ಇರಿಸಲಾಗಿದೆ’ ಎಂದು ತಿಳಿಸಿದ್ದಾರೆ. ಆದಾಗ್ಯೂ, ಯಾವ ತಂಡದ ಎಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ ಎಂಬುದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ.

ಯುಎಇ ತಲುಪಿದ ಕೆಲವೇ ದಿನಗಳಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ (ಸಿಎಸ್‌ಕೆ) ತಂಡದ ಇಬ್ಬರು ಆಟಗಾರರು ಸೇರಿ ಒಟ್ಟು 13 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಬಿಸಿಸಿಐ ಆಗಸ್ಟ್‌ 29ರಂದು ಖಚಿತಪಡಿಸಿತ್ತು. ಇದರ ಬೆನ್ನಲ್ಲೇ ವೈದ್ಯಕೀಯ ಸಿಬ್ಬಂದಿ ಹಾಗೂ ಎನ್‌ಸಿಎ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.

ಸಿಎಸ್‌ಕೆ ಸಿಇಒ ಕೆ. ವಿಶ್ವನಾಥನ್‌ ಅವರು, ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಸದ್ಯ ಸೋಂಕು ಕಾಣಿಸಿಕೊಂಡಿರುವವರನ್ನು 14 ದಿನಗಳ ಪ್ರತ್ಯೇಕವಾಸದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸೆಪ್ಟೆಂಬರ್‌ 1ರಂದು ಹೇಳಿದ್ದರು. ಐಪಿಎಲ್‌ 13ನೇ ಆವೃತ್ತಿಯ ಪಂದ್ಯಗಳು ಇದೇ ತಿಂಗಳ 19ರಿಂದ ನವೆಂಬರ್‌ 10ರ ವರೆಗೆ ದುಬೈ, ಅಬು ಧಾಬಿ, ಶಾರ್ಜಾ ಕ್ರೀಡಾಂಗಣಗಳಲ್ಲಿ ನಡೆಯಲಿವೆ.

- Advertisement -
spot_img

Latest News

error: Content is protected !!