ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಮಂದಿರದ ಆರ್ಥಿಕ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿದೆ ಎಂಬ ಗಂಭೀರ ಆರೋಪದ ವಿವಾದ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ದೇವಸ್ಥಾನದ ದೇಣಿಗೆ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಮತ್ತು ಕೇಂದ್ರೀಯ ತನಿಖಾ ದಳದ (CBI) ಅಡಿಯಲ್ಲಿ ಹೊಸ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕು ಎಂದು ಕೋರಿ ವಕೀಲರಾದ ಅಜಯ್ ಕುಮಾರ್ ರೈ ಮತ್ತು ದಿನೇಶ್ ಕುಮಾರ್ ಯಾದವ್ ಅವರು ಜಂಟಿಯಾಗಿ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ರಾಮ ಮಂದಿರ ಟ್ರಸ್ಟ್ ಮತ್ತು ಉತ್ತರ ಪ್ರದೇಶ ಸರ್ಕಾರವು ದೇವಸ್ಥಾನದ ದೇಣಿಗೆ ರಿಜಿಸ್ಟರ್‌ಗಳು, ಆಡಿಟ್ ವರದಿಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಬ್ಯಾಂಕ್ ದಾಖಲೆಗಳು ಸೇರಿದಂತೆ ಎಲ್ಲಾ ಡಿಜಿಟಲ್ ಮತ್ತು ಭೌತಿಕ ಸಾಕ್ಷ್ಯಗಳನ್ನು ತಕ್ಷಣವೇ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅಷ್ಟೇ ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಆಸ್ತಿ, ಹಣ ಅಥವಾ ಎಲೆಕ್ಟ್ರಾನಿಕ್ ಡೇಟಾವನ್ನು ಯಾರೂ ನಾಶಪಡಿಸದಂತೆ ಅಥವಾ ತಿರುಚದಂತೆ ನ್ಯಾಯಾಲಯವು ಕಟ್ಟುನಿಟ್ಟಿನ ತಡೆಜ್ಞೆ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಕೋಟ್ಯಂತರ ಭಕ್ತರು ತಮ್ಮ ಕಷ್ಟದ ಹಣವನ್ನು ದಾನ ಮಾಡಿದ್ದಾರೆ; ಹೀಗಾಗಿ ಇಂತಹ ಪವಿತ್ರ ನಿಧಿಯ ನಿರ್ವಹಣೆಯಲ್ಲಿ ಪಾರದರ್ಶಕತೆ ತೋರದಿದ್ದರೆ, ಅದು ಸಾರ್ವಜನಿಕರ ನಂಬಿಕೆ ಮತ್ತು ಭಾವನೆಗಳಿಗೆ ಭಾರಿ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.


