ನೆಲ್ಯಾಡಿ: ರಕ್ಷಣಾ ಕಾರ್ಯಾಚರಣೆ ನಿಮಿತ್ತ ಬಂದ ಅಂಬ್ಯುಲೆನ್ಸ್ ನ ಕೀ ಕಿತ್ತುಕೊಂಡು ಚಾಲಕನಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ಉದನೆಯಲ್ಲಿ ನಡೆದಿದೆ.
ಕೆಎಸ್ಸಾರ್ಟಿಸಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಉದನೆ ಸಮೀಪ ಹೊಳೆ ಬದಿಗೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಹಲವರು ಜನ ಗಾಯಗೊಂಡಿದ್ದರು. ಈ ವೇಳೆ ರಕ್ಷಣಾ ಕಾರ್ಯಾಚರಣೆಗೆಂದು ಬಂದ ಅಂಬ್ಯುಲೆನ್ಸ್ ಅನ್ನು ಅಲ್ಲಿನ ಸ್ಥಳೀಯ ನಿವಾಸಿ ಲಿಬಿನ್ ಎಂಬಾತ ವಾಹನದ ಕೀಯನ್ನು ಕಸಿದುಕೊಂಡು ಹಲ್ಲೆ ನಡೆಸಲು ಯತ್ನಿಸಿರುವುದಾಗಿ ಅಂಬ್ಯುಲೆನ್ಸ್ ಚಾಲಕ ನವಾಝ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ.
ಆದರೆ ಸ್ಥಳೀಯರು ಹೇಳಿದ್ದು ಹೀಗೆ:
ಬಸ್ ನದಿಯ ಬಳಿ ಬಿದ್ದಾಗ ಸ್ಥಳಕ್ಕೆ ಆಗಮಿಸಿದ ಲಿಬಿನ್, ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಬಸ್ ನಿಂದ ಹೊರಗೆ ತರಲು ಸಹಾಯ ಮಾಡಿದ್ದ. ನಂತರ ಗಾಯಾಳುಗಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು “ಆರೋಗ್ಯ ಕವಚ” (108 ಆಂಬುಲೆನ್ಸ್) ಸೇವೆಗೆ ಕರೆ ಮಾಡಿದ್ದಾನೆ. ಆದರೆ ತುಂಬಾ ಸಮಯದವರೆಗೆ ‘ಆರೋಗ್ಯ ಕವಚ’ ಆಂಬುಲೆನ್ಸ್ ಆಗಮಿಸಿದ್ದನ್ನು ಗಮನಿಸಿದ ಸ್ಥಳೀಯರು ನೆಲ್ಯಾಡಿಯ ಖಾಸಗಿ ಆಂಬುಲೆನ್ಸ್ ನ ಚಾಲಕನಿಗೆ ಕರೆ ಮಾಡಿ ಬರಹೇಳಿದ್ದಾರೆ. ಖಾಸಗಿ ಆಂಬುಲೆನ್ಸ್ ಮತ್ತು ‘ಆರೋಗ್ಯ ಕವಚ’ ಆಂಬುಲೆನ್ಸ್ ಏಕಕಾಲಕ್ಕೆ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಲಿಬಿನ್ ಮಾನವೀಯತೆ ದೃಷ್ಟಿಯಿಂದ ‘ಖಾಸಗಿ ಆಂಬುಲೆನ್ಸ್ ನಲ್ಲಿ ಹೋದರೆ ನಿಮಗೆ ಹೆಚ್ಚು ಖರ್ಚಾಗಬಹುದು, ಹಾಗಾಗಿ ಸರಕಾರಿ ‘ಆರೋಗ್ಯ ಕವಚ’ ಆಂಬುಲೆನ್ಸ್ ನಲ್ಲಿ ಉಚಿತವಾಗಿ ತೆರಳಿ, ಚಿಕಿತ್ಸೆ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದ್ದಾನೆ.
ಇದರಿಂದ ಕೋಪಗೊಂಡ ಖಾಸಗಿ ಅಂಬ್ಯುಲೆನ್ಸ್ ಚಾಲಕ ನವಾಝ್, ಲಿಬಿನ್ ಗೆ ಹಲ್ಲೆ ಮಾಡಿ ನಿಂದಿಸಿದ್ದಾನೆ. ಇದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದ್ದಂತೆ ನವಾಝ್ ಧರ್ಮಸ್ಥಳ ಠಾಣೆಗೆ ತೆರಳಿ ಲಿಬಿನ್ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆಂದು ಕೇಸು ದಾಖಲಿಸಿದ್ದಾನೆ ಎಂದು ಹೆಸರು ಹೇಳಲು ಇಚ್ಚಿಸದ ಸ್ಥಳೀಯರು ಮಹಾ ಎಕ್ಸ್ಪ್ರೆಸ್ ಸುದ್ದಿತಾಣಕ್ಕೆ ತಿಳಿಸಿದ್ದಾರೆ.


