Friday, May 10, 2024
Homeತಾಜಾ ಸುದ್ದಿಮಂಗಳೂರು: ಅಂತಿಮ ಹಂತದಲ್ಲಿರುವ ಅಡ್ಯಾರ್‌ ಡ್ಯಾಂ ಕಾಮಗಾರಿ: ಮಳೆಗಾಲದ ಬಳಿಕ ನೀರು ಶೇಖರಣೆ

ಮಂಗಳೂರು: ಅಂತಿಮ ಹಂತದಲ್ಲಿರುವ ಅಡ್ಯಾರ್‌ ಡ್ಯಾಂ ಕಾಮಗಾರಿ: ಮಳೆಗಾಲದ ಬಳಿಕ ನೀರು ಶೇಖರಣೆ

spot_img
- Advertisement -
- Advertisement -

ಮಂಗಳೂರು: ಅಡ್ಯಾರ್‌ ದೋಣಿ ಕಡವು ಬಳಿ ನೇತ್ರಾವತಿ ನದಿಗೆ ನಿರ್ಮಿಸಲಾಗುತ್ತಿರುವ ವೆಂಟೆಡ್‌ ಡ್ಯಾಂ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಳೆಗಾಲದ ಬಳಿಕ ಡ್ಯಾಂನಲ್ಲಿ ನೀರು ಸಂಗ್ರಹ ಆರಂಭವಾಗಲಿದೆ. ರಾಜ್ಯದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸುಮಾರು 192 ಕೋಟಿ ರೂ. ವೆಚ್ಚದಲ್ಲಿ ಈ ವೆಂಟೆಡ್‌ ಡ್ಯಾಂ ನಿರ್ಮಾಣ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಉಳ್ಳಾಲ ಪರಿಸರಕ್ಕೆ ಇದೇ ಡ್ಯಾಂನಿಂದ ನೀರು ಪೂರೈಕೆಯಾಗಲಿದೆ. ವೆಂಟೆಡ್‌ ಡ್ಯಾಂ ಜೊಯಲ್ಲಿ ಅಡ್ಯಾರ್‌ ಮೂಲಕ ಹರೇಕಳ ಪಾವೂರು ಪ್ರದೇಶದ ಸಂಪರ್ಕದ ಕನಸೂ ಈ ಯೋಜನೆ ಮೂಲಕ ಸಾಕಾರಗೊಳ್ಳಲಿದೆ.

ಈಗಾಗಲೇ ಯೋಜನೆಯ ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. ಡ್ಯಾಂಗೆ ಗೇಟ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನು ಡ್ಯಾಂನ ಎರಡೂ ಬದಿಯಲ್ಲಿ ಮಣ್ಣು ತುಂಬಿಸಿ ರಸ್ತೆ ಸಂಪರ್ಕ ವ್ಯವಸ್ಥೆ ಇನ್ನಿತರ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇವೆ. ಬಹುತೇಕ ತಿಂಗಳ ಒಳಗಡೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ಮಳೆಗಾಲ ಮುಗಿದ ತಕ್ಷಣ ಡ್ಯಾಂನಲ್ಲಿ ನೀರು ಸಂಗ್ರಹ ಆರಂಭವಾಗಲಿದೆ. ಈ ಯೋಜನೆ ಮೂಲಕ ತೊಕ್ಕೊಟ್ಟು, ಉಳ್ಳಾಲ, ದೇರಳಕಟ್ಟೆ, ಸೋಮೇಶ್ವರ, ಕೋಟೆಕಾರ್‌ ಪರಿಸರಕ್ಕೆ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆಯಾಗಲಿದೆ.

520 ಮೀ. ಉದ್ದದ ವೆಂಟೆಡ್‌ ಡ್ಯಾಂ ಮೇಲ್ಗಡೆ ವಾಹನ ಸಂಚಾರಕ್ಕೆ ವ್ಯವಸ್ಥೆ ಇದೆ. ಸುಮಾರು 7.5 ಮೀ. ಅಗಲ ಹಾಗೂ ಎರಡೂ ಬದಿಗಳಲ್ಲಿ ತಲಾ ಒಂದು ಮೀ. ಅಗಲದ ಫುಟ್‌ಪಾತ್‌ ವ್ಯವಸ್ಥೆ ಇದೆ. ಒಟ್ಟು 52 ಕಿಂಡಿಗಳನ್ನು ನಿರ್ಮಿಸಲಾಗಿದೆ. ಈ ಡ್ಯಾಂ ಮೂಲಕ ಅಂದಾಜು 0.6 ಟಿಎಂಸಿ ನೀರು ಶೇಖರಣೆ ಸಾಧ್ಯವಾಗಲಿದೆ. ಭವಿಷ್ಯದ ಮಂಗಳೂರಿನ ನೀರಿನ ಅಗತ್ಯ ನೀಗಿಸುವ ನಿಟ್ಟಿನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಹರೇಕಳ ಡ್ಯಾಂನಿಂದ 50 ಎಂಎಲ್‌ಡಿ ಹೆಚ್ಚುವರಿ ನೀರನ್ನು ಮಂಗಳೂರಿಗೆ ತರಲು ಚಿಂತನೆ ನಡೆಯುತ್ತಿದೆ. ಮಂಗಳೂರಿನಲ್ಲಿ ಈಗಾಗಲೇ ಜಲಸಿರಿ ಯೋಜನೆ ಜಾರಿಯಾಗಿದ್ದು, ಮುಂದೆ 24*7 ಮಾದರಿಯಲ್ಲಿ ನೀರು ಪೂರೈಕೆ ವ್ಯವಸ್ಥೆಯಾಗಲಿದೆ. ಈ ಸಂದರ್ಭ ಎದುರಾಗಲಿರುವ ನೀರಿನ ಕೊರತೆ ನೀಗಿಸಲು ಹರೇಕಳ ವೆಂಟೆಡ್‌ ಡ್ಯಾಂನಿಂದ ಹೆಚ್ಚುವರಿ ನೀರು ಪಡೆಯುವ ಮೂಲಕ ಪರಿಹಾರ ಕಂಡುಕೊಳ್ಳುವ ಚಿಂತನೆ ನಡೆಯುತ್ತಿದೆ.

- Advertisement -
spot_img

Latest News

error: Content is protected !!